ಮೂಡಲಗಿ : ಗ್ರಾಮದ ಅಭಿವೃದ್ಧಿಯಲ್ಲಿ ನಾಗರೀಕರ ಸಹಕಾರ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಹೊಸಟ್ಟಿ ಗ್ರಾಮಸ್ಥರು ಒಂದಾಗಿ ಸೇರಿಕೊಂಡು ಗ್ರಾಮಾಭಿವೃದ್ಧಿಗೆ ದುಡಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದು
ಶಾಸಕ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ತಾಲ್ಲೂಕಿನ ಹೊಸಟ್ಟಿ ಗ್ರಾಮದಲ್ಲಿ ಸೋಮವಾರದಂದು ಒಟ್ಟು 1.16 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು.

ಹೊಸಟ್ಟಿ ಗ್ರಾಮದ ಅಭಿವೃದ್ಧಿಗೆ ಹತ್ತು- ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ಮತಗಳನ್ನು ನನಗೆ ನೀಡಿ ಆಶೀರ್ವಾದ ಮಾಡಿದ್ದೀರಿ. ಒಗ್ಗಟ್ಟಿನ ಫಲದಿಂದ ಸರ್ಕಾರದ ಯೋಜನೆಗಳನ್ನು ಹಾಕಿಕೊಳ್ಳಲು ಖುಷಿಯಾಗುತ್ತದೆ. ಗ್ರಾಮಸ್ಥರು ಕೂಡಿಕೊಂಡು ಗ್ರಾಮದ ಸುಧಾರಣೆಗಾಗಿ ಹೋರಾಡುತ್ತಿರುವುದು ನಮಗೆ ಇನ್ನಷ್ಟು ಸಂತಸವು ಮೂಡಿದೆ. ಇದೇ ಒಗ್ಗಟ್ಟು ಮುಂದಿನ ದಿನಗಳಲ್ಲಿಯೂ ಕಾಯ್ದುಕೊಂಡು ಹೊಸಟ್ಟಿ ಸುಧಾರಣೆಗೆ ಎಲ್ಲರೂ ಕೈಜೋಡಿಸುವಂತೆ ಗ್ರಾಮಸ್ಥರಿಗೆ ಸಲಹೆ ಮಾಡಿದರು.
*ಗುಣಮಟ್ಟದ ಹಾಲು ಪೂರೈಸಿ:* ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಜಿಲ್ಲಾ ಹಾಲು ಒಕ್ಕೂಟನ್ನು ಬಲಗೊಳಿಸುವಂತೆ ಬಾಲಚಂದ್ರ ಜಾರಕಿಹೊಳಿಯವರು ರೈತ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಹೊಸಟ್ಟಿ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ನಮ್ಮ ದೇಶದ ಬೆನ್ನೆಲುಬು ಆಗಿದ್ದಾರೆಂದು ತಿಳಿಸಿದರು.
ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ರೈತರಿಗೆ ಲಾಭವಾಗಬೇಕೆನ್ನುವ ಉದ್ದೇಶದಿಂದಲೇ ನಮ್ಮ ಒಕ್ಕೂಟದಿಂದ ರೈತಪರ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಗ್ರಾಹಕರು, ಹೈನುದಾರ ರೈತರು ಮತ್ತು ಸಿಬ್ಬಂದಿಗಳ ಶ್ರಮದಿಂದ ಒಕ್ಕೂಟಕ್ಕೆ ಬಂದ ಲಾಭದಲ್ಲಿ ರೈತರಿಗೆ ಶೇ. 60 ರಷ್ಟು ರಿಯಾಯ್ತಿಯೊಂದಿಗೆ ವಿವಿಧ ಸಲಕರಣೆಗಳನ್ನು ನೀಡುತ್ತಿರುವುದಾಗಿ ಅವರು ಹೇಳಿದರು.
*1.16 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಉದ್ಘಾಟಿಸಿದ ಶಾಸಕ*-
20 ಲಕ್ಷ ರೂಪಾಯಿ ವೆಚ್ಚದ ಅಂಗನವಾಡಿ ಕಟ್ಟಡ, 10 ಲಕ್ಷ ರೂಪಾಯಿ ವೆಚ್ಚದ ಗರಡಿಮನೆ, 5 ಲಕ್ಷ ರೂಪಾಯಿ ವೆಚ್ಚದ ಗ್ರಂಥಾಲಯ, 17 ಲಕ್ಷ ರೂಪಾಯಿ ವೆಚ್ಚದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಭೋಜನಾಲಯ, ತಲಾ 12 ಲಕ್ಷ ರೂಪಾಯಿ ವೆಚ್ಚದ ಎರಡು ಹೊಸ ಶಾಲಾ ಕೊಠಡಿಗಳು, 10 ಲಕ್ಷ ರೂ, ವೆಚ್ಚದ ಹಾಲಿನ ಡೈರಿಯ ಕಟ್ಟಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಉದ್ಘಾಟಿಸಿದರು.
ತಲಾ 10 ಲಕ್ಷ ರೂಪಾಯಿ ವೆಚ್ಚದ ಲಕ್ಷ್ಮೀ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ ಮತ್ತು ಎಸ್ಸಿ ಕಾಲನಿಯ ದುರ್ಗವ್ವ ದೇವಸ್ಥಾನದ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎ.ಟಿ.ಗಿರಡ್ಡಿ, ಮೂಡಲಗಿ ಬಿಇಓ ಪ್ರಕಾಶ ಹಿರೇಮಠ, ಅರಭಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಗದೀಶ ಡೊಳ್ಳಿ, ಪ್ರಮುಖರಾದ ಸದಾಶಿವ ನಾಯಿಕ, ಮಲ್ಲಪ್ಪ ಕಬ್ಬೂರ, ಕೃಷ್ಣಾ ತಳವಾರ, ಪ್ರಕಾಶ ಕಬ್ಬೂರ, ವೆಂಕಪ್ಪ ಗಡ್ಡೇದ, ಬಸಪ್ಪ ಕುಬ್ಬನ್ನವರ, ಯಲ್ಲಪ್ಪ ಕಂಬಳಿ, ಯಲ್ಲಪ್ಪ ಬಗರನಾಳ, ಸಿದ್ದಪ್ಪ ಹೊಸಮನಿ, ಮಲ್ಲಪ್ಪ ನಾಯಿಕ, ಕಲ್ಲಪ್ಪ ದೊಡ್ಡಸಿನ್ನಿ, ಭೀಮಶಿ ಕೊಪ್ಪದ, ಯಮನಪ್ಪ ಗಡ್ಡೇದ, ಕೃಷ್ಣಾ ತಳವಾರ, ಶ್ರೀಶೈಲ ಬೆಳ್ಳಗಿ, ಶಂಕರ ಕೊಪ್ಪದ, ಬಸಪ್ಪ ಮೆಚ್ಚನವರ, ಪಿಡಿಓ ಉದಯ ಬೆಳ್ಳುಂಡಗಿ, ಕೆಜಿಎಸ್ ಪ್ರಗುರು ಮಾರುತಿ ಸಿದ್ಧಾಪೂರ, ಗೋಪಾಲ ಗುಡ್ಲಿ ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA