ಖಾನಾಪೂರದ ಕುಸಮಳ್ಳಿಯಲ್ಲಿ ನಡೆಯುತ್ತಿರುವ ಪಂ. ದೀನ ದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ

ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ಬಲಾಢ್ಯ ರಾಷ್ಟ್ರ
*ಬೆಳಗಾವಿ:* ಡಾ. ಶ್ಯಾಂ ಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನ ದಯಾಳ ಉಪಾಧ್ಯಾಯ ಅವರ ತ್ಯಾಗ, ಬಲಿದಾನಗಳಿಂದ ಬಿಜೆಪಿಯು ಇಂದು ರಾಷ್ಟ್ರ ಮಟ್ಟದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ರವಿವಾರ ಖಾನಾಪೂರ ತಾಲ್ಲೂಕಿನ ಕುಸಮಳ್ಳಿಯ ಹೊರವಲಯದಲ್ಲಿರುವ ಕೈವಲ್ಯ ಫೌಂಡೇಶನ್ ಯೋಗಾ ರೀಟ್ರೀಟ್ ನಲ್ಲಿ ಆರಂಭವಾಗಿರುವ ಪಂಡಿತ ದೀನ ದಯಾಳ ಉಪಾಧ್ಯಾಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ಮಹಾಭಿಯಾನ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿಯೇ ಬಿಜೆಪಿಯು ಅತೀ ಹೆಚ್ಚು ಸದಸ್ಯತ್ವವನ್ನು ಹೊಂದಿದ ಪಕ್ಷವಾಗಿದೆ ಎಂದು ಅವರು ತಿಳಿಸಿದರು.
ಜನಸಂಘದಿಂದ ಆರಂಭಗೊಂಡಿರುವ ಬಿಜೆಪಿಗೆ ಶ್ಯಾಂ ಪ್ರಸಾದ ಮುಖರ್ಜಿ ಮತ್ತು ಪಂ. ದೀನ ದಯಾಳ ಉಪಾಧ್ಯಾಯ ಅವರು ಸ್ಥಾಪಕರಾಗಿ ಬೇರು ಬಿಡುವಲ್ಲಿ ಮಹತ್ತರ ಪಾತ್ರ ವಹಿಸಿದರು. ಜನಸಂಘದಿಂದ ಪ್ರಭಾವಿತರಾಗಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯವರು ಜನಸಂಘದ ಯಾತ್ರೆಯನ್ನು ಮುಂದುವರೆಸಿಕೊಂಡು ಹೋದರು. ನಂತರ ಜನಸಂಘವನ್ನು ಭಾರತೀಯ ಜನತಾ ಪಕ್ಷವನ್ನಾಗಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಗಲಿದ ಮಹಾನ್ ಚೇತನರ ಹಾದಿಯಲ್ಲಿ ಸಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ರಾಷ್ಟ್ರದ ಸುಮಾರು 22 ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ದೇಶದ ಮೂಲೆ- ಮೂಲೆಗಳಲ್ಲೂ ಬಿಜೆಪಿ ಬಾವುಟ ಹಾರಿಸಿದ್ದು, ಕಮಲ ಅರಳಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿ ನಾಯಕತ್ವದಿಂದ ಜಗತ್ತಿನಲ್ಲಿ ನಮ್ಮ ಭಾರತವು ಪ್ರಕಾಶಿಸುತ್ತಿದೆ. ಇದಕ್ಕೆ ಕಾರಣ ಮೋದಿಯವರ ಜನಪ್ರಿಯ ಕಾರ್ಯಕ್ರಮಗಳು ಸಾಕ್ಷಿಯಾಗಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಜಾರಿ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಯಾವೊಂದು ಹೊಸ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಇದರಿಂದ ಜನ ಬೇಸತ್ತಿದ್ದಾರೆ. ಮಂದೆ ನಡೆಯುವ 2028 ರ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿಯು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ವಹಿಸಿದ್ದರು.
ಬೆಳಗಾವಿ ವಿಭಾಗೀಯ ಪ್ರಭಾರಿ ಸಂಜಯ ಪಾಟೀಲ, ಖಾನಾಪೂರ ಮಂಡಲ ಅಧ್ಯಕ್ಷ ಬಸಚರಾಜ ಸಾಣಿಕೊಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಎನ್, ರವಿಕುಮಾರ್, ಮಾಜಿ ಶಾಸಕರಾದ ಅರವಿಂದ ಪಾಟೀಲ, ಅಭಿಯಾನದ ಪ್ರಭಾರಿ ವಿಲಾಸ ಪವಾರ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮದನ್ನವರ, ರಮೇಶ ದೇಶಪಾಂಡೆ, ಮಲ್ಲಿಕಾರ್ಜುನ ಬಾಳಿಕಾಯಿ, ಜಿಲ್ಲೆಯ ಎಲ್ಲ ಮಂಡಲಗಳ ಅಧ್ಯಕ್ಷರು, ಜಿಲ್ಲಾ ಮತ್ತು ಮಂಡಲ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA