ವಿಜಯಪುರ: ನಗರದ ಆದರ್ಶನಗರ ಪೊಲೀಸ್ ಠಾಣೆಯ ಪಿಎಸ್ಐ ಸೀತಾರಾಮ್ ಲಮಾಣಿ ಭ್ರಷ್ಟಾಚಾರ ಕಿರುಕುಳಕ್ಕೆ ಬೇಸತ್ತು ಸಿಎಂ, ಗೃಹಸಚಿವ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಠಾಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಮೂಹಿಕ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.



ಪಿಎಸ್ಐ ಲಮಾಣಿ ಆದರ್ಶನಗರ ಪೊಲೀಸ್ ಠಾಣೆಯಿಂದ ತಿಕೋಟ ಪೊಲೀಸ್ ಠಾಣೆಗೆ ವರ್ಗಾವಣೆಗಾಗಿ ಹಣ ಹೊಂದಿಸುತ್ತಿದ್ದಾರೆ.ಹೀಗಾಗಿ ಹಣಕ್ಕಾಗಿ ವಿಪರೀತ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಪಿಎಸ್ಐ ತೊಂದರೆಯುಂಟು ಮಾಡುತ್ತಿದ್ದಾರೆ.
ಠಾಣೆಯಲ್ಲಿ ದಾಖಲಾಗುವ ಎಫ್ಐಆರ್, ದೂರುದಾರರಿಂದ 10,000 ರೂ.ಯಿಂದ 1 ಲಕ್ಷ ರೂ.ವರೆಗೆ ಸಿಬ್ಬಂದಿ ಹಣ ವಸೂಲಿ ಮಾಡಬೇಕು ಎಂದು ಒತ್ತಡ ಹೇರಿದ್ದಾರೆ. ಇನ್ನು ಹಣ ವಸೂಲಿಗೆ 5.0 ಕೋಡ್ ಅಂದ್ರೆ 50,000 ರೂ. ಹೀಗೆ ಕೋಡ್ ಬಳಸಿ ಹಣ ವಸೂಲಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಬಾರ್, ಸ್ಪಾ, ಸಿಗರೇಟ್ ಹಾಗೂ ಮಾವಾ (ತಂಬಾಕು), ವೇಶ್ಯಾವಾಟಿಕೆ ಸೇರಿದಂತೆ ಅನೇಕ ವ್ಯವಹಾರಗಳಿಂದ ವಸೂಲಿಗೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ತಮ್ಮ ನೋವನ್ನು ತೋಡಿಕೊಂಡಿರುವ ಅಧಿಕಾರಿ, ಪಿಎಸ್ಐ ಅವರು ಪ್ರತಿ ವಿಷಯದಲ್ಲೂ ಹಣದ ಬೇಡಿಕೆ ಇಡುತ್ತಾರೆ ಮತ್ತು ಹಣ ನೀಡದಿದ್ದರೆ ಕರ್ತವ್ಯದಲ್ಲಿ ಇಲ್ಲದ ಸಬೂಬುಗಳನ್ನು ಹೇಳಿ ಕಿರುಕುಳ ನೀಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೇಲಾಧಿಕಾರಿಗಳ ಈ ವರ್ತನೆಯಿಂದಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA