Breaking News

ಚರ್ಚೆಗೆ ಬರಲಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಸವಾಲು


ಬೆಳಗಾವಿ: ಬಿಡಿಸಿಸಿ ಬ್ಯಾಂಕಿನ ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟಪಡಿಸಿದರು.

ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಠೇವಣಿ ವಿಚಾರದಲ್ಲಿ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಮತ್ತು ಡಾ. ಮಹಾಂತೇಶ ಕಡಾಡಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕಡಾಡಿ ಅವರಿಗೆ ನೋಟಿಸ್ ನೀಡಲಾಗಿದ್ದು, ರಮೇಶ ಕತ್ತಿ ಮಿತಿ ಮೀರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಸುಮಾರು ₹500 ಕೋಟಿ ಠೇವಣಿ ಸಂಗ್ರಹವಾಗಿದೆ. ಬ್ಯಾಂಕ್‌ನಲ್ಲಿ ಒಟ್ಟು ₹5,575 ಕೋಟಿ ಠೇವಣಿ ಇದ್ದು, ರೈತರಿಗೆ ಕೃಷಿ ಸಾಲವಾಗಿ ₹3,710 ಕೋಟಿ ಹಾಗೂ ಕೃಷಿಯೇತರ ಸಾಲವಾಗಿ ₹127 ಕೋಟಿ ವಿತರಿಸಲಾಗಿದೆ ಎಂದು ತಿಳಿಸಿದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಎಕರೆಗೆ ₹40 ಸಾವಿರ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಕೃಷಿಯೇತರ ಚಟುವಟಿಕೆಗಳಿಗೆ ಶೇ.8.8 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಬ್ಯಾಂಕ್ ಬಗ್ಗೆ ಅಪಪ್ರಚಾರದಿಂದ ಗೊಂದಲ ಉಂಟಾಗುತ್ತಿದ್ದು, ಅದಕ್ಕೆ ತೆರೆ ಎಳೆಯಲು ಸ್ಪಷ್ಟೀಕರಣ ನೀಡುತ್ತಿದ್ದೇವೆ. ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಸುಪ್ರಸಿದ್ಧ ಉದ್ಯಮಿ ಜಯಶೀಲ ಶೆಟ್ಟಿ ಅವರು ತಮ್ಮ ಕೃಷಿಯೇತರ ಜಮೀನಿನ ಮೇಲೆ ಸಾಲ ಪಡೆದು ₹8 ಕೋಟಿ ಬಡ್ಡಿ ಪಾವತಿಸಿರುವ ಉದಾಹರಣೆಯನ್ನೂ ನೀಡಿದ ಅವರು, ಸಾಲ ಪಡೆದವರು ನಿಯಮಿತವಾಗಿ ಬಡ್ಡಿ ಪಾವತಿಸುತ್ತಿದ್ದಾರೆ ಎಂದರು. ಶೂನ್ಯ ಬಡ್ಡಿದರ ಸಾಲ ಪರಿಷ್ಕರಣೆ ಕುರಿತು ರೈತ ಸಂಘಟನೆಗಳು ಮನವಿ ಸಲ್ಲಿಸಿದ್ದರೂ, ನಬಾರ್ಡ್ ಮಾರ್ಗಸೂಚಿ ಹಾಗೂ ರಾಜ್ಯ–ಜಿಲ್ಲಾ ತಾಂತ್ರಿಕ ಸಮಿತಿಯ ತೀರ್ಮಾನಗಳ ಆಧಾರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲೆಯ 1200 ಸೊಸೈಟಿ ಶಾಖೆಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರ ಸಾಲ ಹಾಗೂ ಕೃಷಿಯೇತರ ಸಾಲ ನೀಡಲಾಗುತ್ತಿದ್ದು, ರಾಜ್ಯದಲ್ಲೇ ಅತಿ ಹೆಚ್ಚು 4.75 ಲಕ್ಷ ರೈತರಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದರು. ತಾವು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇನೆ ಎಂಬ ರಮೇಶ ಕತ್ತಿ ಹೇಳಿಕೆ ಕುರಿತು ಆತ್ಮಸಾಕ್ಷಿಯಾಗಿ ಸ್ಪಷ್ಟಪಡಿಸಬೇಕು ಎಂದು ಜೊಲ್ಲೆ ಆಗ್ರಹಿಸಿದರು.

 

ಚರ್ಚೆಗೆ ಬರಲಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಸವಾಲು

ಇದಕ್ಕೂ ಮುನ್ನ ಮಾತನಾಡಿದ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಠೇವಣಿ ವಿಚಾರದಲ್ಲಿ ಡಾ. ಮಹಾಂತೇಶ ಕಡಾಡಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ತಪ್ಪು ಅಂಕಿ-ಅಂಶಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.

ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ₹160 ಕೋಟಿ ಸಾಲ ನೀಡಲಾಗಿದ್ದು, ಅದರಲ್ಲಿ ₹80 ಕೋಟಿ ಕೊಲ್ಲಾಪುರದಿಂದ ಹಾಗೂ ₹80 ಕೋಟಿ ಬ್ಯಾಂಕ್‌ನಿಂದ ನೀಡಲಾಗಿದೆ. ಸುಮಾರು ₹300 ಕೋಟಿ ಮೌಲ್ಯದ ಆಸ್ತಿಯನ್ನು ಪ್ಲೇಜ್ ಮಾಡಿಕೊಂಡಿದ್ದು, 432 ಎಕರೆ ಜಮೀನು ಮತ್ತು ₹232 ಕೋಟಿ ಮೌಲ್ಯದ ಪ್ಲಾಂಟೇಷನ್ ಭದ್ರತೆ ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ಕೆಲವರು ಬ್ಯಾಂಕ್ ದಿವಾಳಿ ಆಗಬೇಕು ಎಂಬ ಉದ್ದೇಶದಿಂದ ಸಾಲ ಕೊಡಬೇಡಿ, ಬ್ಯಾಂಕ್‌ಗೆ ಕೀಲಿ ಹಾಕಿ ಎನ್ನುವಂತೆ ಹೇಳಿಕೆ ನೀಡುತ್ತಿದ್ದಾರೆ. ಬ್ಯಾಂಕ್ ಉತ್ತಮ ಆಡಳಿತದಲ್ಲಿ ನಡೆಯುತ್ತಿದ್ದು, ಐದು ವರ್ಷಗಳಲ್ಲಿ ₹10 ಸಾವಿರ ಕೋಟಿ ವ್ಯವಹಾರ ಗುರಿ ಹೊಂದಿದ್ದೇವೆ. ಆರೋಪಗಳಿದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವಿರೋಧಿಗಳಿಗೆ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮತ್ತು ಶಾಸಕ ರಾಜು ಕಾಗೆ, ನಿರ್ದೇಶಕರಾದ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡ್ಡಗೌಡರ, ಅಪ್ಪಾಸಾಬ ಕುಲಗುಡೆ, ರಾಹುಲ ಜಾರಕಿಹೊಳಿ, ರಾಜೇಂದ್ರ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಡಾ. ಕೋರೆ ಅವರಿಗೆ ಪದ್ಮಶ್ರೀ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ಬೆಳಗಾವಿ- ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಳಗಾವಿಯವರೇ ಆದ ಡಾ.ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ