ಗೋಕಾಕ- ಧಾರ್ಮಿಕ ಪರಂಪರೆಯನ್ನು ಬೆಳೆಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ಕಲಾರಕೊಪ್ಪ ಗ್ರಾಮದ ಚಾಮುಂಡೇಶ್ವರಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಿನ ಯುವ ಪೀಳಿಗೆಗೆ ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯವಿದೆ ಎಂದವರು ತಿಳಿಸಿದರು.
ಕಳೆದ ಮೂವತ್ತು ವರ್ಷಗಳಿಂದ ಕಲಾರಕೊಪ್ಪ ಗ್ರಾಮಸ್ಥರು ಎಂಥ ಪರಿಸ್ಥಿತಿಯಲ್ಲೂ ನಮ್ಮೊಂದಿಗೆ ಇದ್ದಾರೆ. ನಮ್ಮ ಕುಟುಂಬಕ್ಕೆ ಶಕ್ತಿಯಾಗಿ ನಿಂತಿದ್ದಾರೆ. ಪ್ರತಿ ಚುನಾವಣೆಗಳಲ್ಲಿ ನನ್ನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತ ಬರುತ್ತಿದ್ದಾರೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಅನುಷ್ಟಾನಗೊಳಿಸಲಾಗಿದೆ. ಜನರ ಮೂಲ ಸೌಕರ್ಯಗಳನ್ನು ನೀಗಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ. ಈಗಿರುವ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಾಗಿದೆ. ಮುಂಬರುವ ದಿನಗಳಲ್ಲಿ ಸರಿಯಾಗಬಹುದು. ಒಟ್ಟಿನಲ್ಲಿ ಕಲಾರಕೊಪ್ಪ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಿರುವುದಾಗಿ ಅವರು ಹೇಳಿದರು.
ನಮ್ಮ ಹಿಂದಿನ ವೈಭವಗಳನ್ನು ಜಾತ್ರೆಗಳು ಬಿಂಬಿಸುತ್ತವೆ. ನಮ್ಮ ಪರಂಪರೆ, ಇತಿಹಾಸ, ಸಂಸ್ಕೃತಿಗಳನ್ನು ಮೆಲುಕು ಹಾಕುತ್ತವೆ. ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ಎಲ್ಲರೂ ಸಾಮರಸ್ಯಗಳಿಂದ ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತೇವೆ. ನಮ್ಮ ಇಷ್ಟಾರ್ಥಗಳ ಕೋರಿಕೆಗಾಗಿ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ. ಕಲಾರಕೊಪ್ಪ ಗ್ರಾಮದಲ್ಲಿ ಪ್ರತಿಷ್ಟಾಪನೆಗೊಂಡಿರುವ ಚಾಮುಂಡೇಶ್ವರಿ ತಾಯಿಯ ದೇವರ ದರ್ಶನ ಮಾಡಿದರೆ ಸಾಕ್ಷಾತ್; ಮೈಸೂರು ಚಾಮುಂಡೇಶ್ವರಿ ದರ್ಶನ ಮಾಡಿದ ಅನುಭವವಾಗುತ್ತದೆ. ತಾಯಿ ಚಾಮುಂಡೇಶ್ವರಿ ನಾಡಿನ ಸಮಸ್ತ ಜನರಿಗೆ ಸುಖ, ನೆಮ್ಮದಿ, ಆರೋಗ್ಯ ನೀಡಿ ಕರುಣಿಸಲಿ. ನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದೆ. ರೈತರ ಬದುಕು ಬಂಗಾರವಾಗಲು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲಿ ಎಂದು ಅವರು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಮುಂಡೇಶ್ವರಿ ದೇವರ ದರ್ಶನ ಪಡೆದರು. ಕಲಾರಕೊಪ್ಪ ಗ್ರಾಮಸ್ಥರು ಶಾಸಕರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮೆಳವಂಕಿ ಜಿ.ಪಂ. ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಉದಗಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಅರ್ಜುನ ಸನದಿ, ಕೌಜಲಗಿಯ ರವಿ ಪರುಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಭೀಮಪ್ಪ ಗೌಡಪ್ಪನವರ,ಸಿದ್ದಪ್ಪ ಕಣವಿ,ಕಲ್ಲಪ್ಪ ಸಿಂಗನ್ನವರ, ಮಹಾದೇವ ಬಗಟಿ, ಪರಸಪ್ಪ ಬಗಟಿ, ರಾಯಪ್ಪ ಗೌಡಪ್ಪನವರ, ಸಿದ್ದಪ್ಪ ದಾಸಪ್ಪನವರ, ರಾಯಪ್ಪ ಚಿಗಡೊಳ್ಳಿ, ಉಮೇಶ ನಾಯಿಕ, ದುಂಡಪ್ಪ ಶೇಡಬಾಳ, ಮುತ್ತಪ್ಪ ದೊಡಮನಿ, ಯಲ್ಲಪ್ಪ ಬಗಟಿ, ರಾಯಪ್ಪ ಗೌಡಪ್ಪನವರ, ಪರಸಪ್ಪ ಕಣವಿ, ಅಡಿವೆಪ್ಪ ಬಗಟಿ, ಮಲ್ಲಪ್ಪ ಹರಿಜನ, ದೇವಸ್ಥಾನದ ಟ್ರಸ್ಟ ಕಮೀಟಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.