ಗದಗ: ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಗಳೊಬ್ಬಳು ಪ್ರಿಯಕರನೊಂದಿಗೆ ಮನೆ ಬಿಟ್ಟು ಹೋಗಿ ಮದುವೆ ಮಾಡಿಕೊಂಡ ಪ್ರಕರಣವೀಗ ಎಸ್ಪಿ ಅಂಗಳಕ್ಕೆ ಬಂದಿದೆ. ನಾವಿಬ್ಬರೂ 7 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹಾಗಾಗಿ ನಾವು ಬೇರೆಡೆ ಹೋಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಪಿಎಸ್ಐ ಆಗಿರುವ ನನ್ನ ತಾಯಿಯೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅವರು ನಮ್ಮನ್ನು ಬದುಕಲು ಬಿಡಲ್ಲ. ನಮಗೆ ರಕ್ಷಣೆ ಕೊಡಿ ಎಂದು ತಾಯಿ ವಿರುದ್ಧವೇ ಯುವತಿ ಎಸ್ಪಿಗೆ ದೂರು ಕೊಟ್ಟಿದ್ದಾಳೆ.
ರಾಜೀವ್ ಗಾಂಧಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೇಣುಕಾ ಮುಂಡೆವಾಡಗಿ ಮತ್ತು ಅಗ್ನಿಶಾಮಕ ಇಲಾಖೆಯ ಹವಾಲ್ದಾರ್ ರಮೇಶ್ ದಂಪತಿಯ ಏಕೈಕ ಮಗಳು ಮೇಘಾ 6 ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಕೀರ್ತನಾಥ ಎಂಬಾತನೊಂದಿಗೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದಾಳೆ.
ವಿಚಾರ ತಿಳಿದು ಗರಂ ಆದ ತಾಯಿ ರೇಣುಕಾ ಮತ್ತು ತಂದೆ ರಮೇಶ್ ಇಬ್ಬರೂ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮೇಘಾ ಗದಗ ಎಸ್ಪಿ ಎನ್.ಯತೀಶ್ ಅವರಿಗೆ ದೂರು ನೀಡಿದ್ದಾಳೆ.
ಮೇಘಾ ಮತ್ತು ಕೀರ್ತನಾಥ ಇಬ್ಬರ ಪ್ರೀತಿ ವಿಚಾರ ಮನೆಗೆ ತಿಳಿದಿತ್ತು. ಜಾತಿ ಬೇರೆ ಬೇರೆ ಆದ ಕಾರಣ ಮದುವೆಗೆ ಕುಟುಂಬಸ್ಥರು ಒಪ್ಪಿರಲಿಲ್ಲವಂತೆ. ಕರೊನಾ ಲಾಕ್ಡೌನ್ ವೇಳೆ ಮೇಘಾಳಿಗೆ ಮದುವೆ ಮಾಡಲು ಪೋಷಕರು ಬೇರೆ ಕಡೆ ಸಂಬಂಧ ನೋಡುತ್ತಿದ್ದರಂತೆ. ಇದನ್ನರಿತ ಮೇಘಾ ಮನೆ ಬಿಟ್ಟು ಪ್ರಿಯಕರನೊಂದಿಗೆ ಹೋಗಿದ್ದಳು. 2020ರ ಡಿಸೆಂಬರ್ 2ರಂದು ಇವರಿಬ್ಬರೂ ಮದುವೆ ಮಾಡಿಕೊಂಡಿದ್ದು, ಮುಂಡರಗಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ 2021ರ ಜನವರಿ 5ರಂದು ರಿಜಿಸ್ಟರ್ ಮಾಡಿಸಿದ್ದರು. ಬಳಿಕ ಗೋವಾದಲ್ಲಿ ತಂಗಿದ್ದರು. ಈ ವಿಚಾರ ತಿಳಿದ ಮೇಘಾ ಪಾಲಕರು ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರಂತೆ. ಇದೀಗ ಊರಿಗೆ ವಾಪಸ್ ಬರುತ್ತಿದ್ದೇವೆ. ನಮಗೆ ರಕ್ಷಣೆ ಕೊಡಬೇಕು ಎಂದು ಯುವತಿ ಎಸ್ಪಿಗೆ ಮನವಿ ಮಾಡಿದ್ದಾಳೆ. ಪ್ರೇಮಿಗಳಿಗೆ ರಕ್ಷಣೆ ನೀಡುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆ.