ನವದೆಹಲಿ: ಪುತ್ರಿಯರಿಗೂ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವ ಹಿಂದು ಉತ್ತರಾಧಿಕಾರ ಕಾಯ್ದೆ (2005) ಪೂರ್ವಾನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಂದೆ ಅಥವಾ ತಾಯಿ ಸೇರಿ ಆಸ್ತಿ ಹಕ್ಕುದಾರರು ಹಿಂದು ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ 2005ಕ್ಕೂ ಮೊದಲೇ ನಿಧನರಾಗಿದ್ದರೂ, ಅವರ ಆಸ್ತಿಯಲ್ಲಿ ಹೆಣ್ಣುಮಕ್ಕಳು ಸಮಾನ ಪಾಲು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂರು ಸದಸ್ಯರ ಪೀಠ ಈ ಮಹತ್ವದ ಆದೇಶ ನೀಡಿದೆ. ಆಸ್ತಿ ಒಡೆತನ ಹೊಂದಿದವರು 2005 ಕ್ಕೂ ಮುನ್ನವೇ ನಿಧನರಾಗಿದ್ದರೂ, ಹೊಸ ಕಾಯ್ದೆ ಅನ್ವಯವೇ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.
ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು ಕಾಯ್ದೆ ಪೂರ್ವಾನ್ವಯವಾಗಲಿದೆಯೇ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಈ ತೀರ್ಪು ನೀಡಿದೆ.
ಮಗಳು ಯಾವಾಗಲೂ ತಂದೆಗೆ ಪ್ರೀತಿಪಾತ್ರಳೇ ಆಗಿರುತ್ತಾಳೆ. ತಂದೆ ಬದುಕಿರಲಿ, ಮೃತಪಟ್ಟಿರಲಿ ಆಕೆ ಆತನ ಆಸ್ತಿಗೆ ಹಕ್ಕುದಾರಳೇ ಆಗಿರುತ್ತಾಳೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ತೀರ್ಪಿನಲ್ಲಿ ಹೇಳಿದ್ದಾರೆ
ಹಿಂದು ಅವಿಭಜಿತ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಇರುವಷ್ಟೇ ಅಧಿಕಾರ ಹೆಣ್ಣುಮಕ್ಕಳಿಗೂ ಇದೆ. ಗಂಡುಮಗುವಿಗೆ ನೀಡಿದ ಪಾಲನ್ನೇ ಹೆಣ್ಣುಮಕ್ಕಳಿಗೂ ನೀಡಬೇಕಾಗುತ್ತದೆ ಎಂದು ಹೇಳಿದೆ.