ಬೆಂಗಳೂರು,ನ.26-ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಾಳೆ ಬೆಳಗ್ಗೆ ಸಚಿವ ಸಂಪುಟ ಸಭೆ ನಡೆಯಲಿದೆ. ನಾಳೆ ಬೆಳಗ್ಗೆ 10.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸಚಿವಸಂಪುಟ ವಿಸ್ತರಣೆ ತೂಗುಯ್ಯಾಲೆಯಲ್ಲಿರುವಾಗಲೇ ಸಿಎಂ ನಾಳೆ ಕರೆದಿರುವ ಸಂಪುಟ ಸಭೆ ರಾಜಕೀಯ ವಲದಯಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಕಳೆದ ಬಾರಿ ನಡೆದ ಸಂಪುಟ ಸಭೆಯಲ್ಲಿ ಸಂಪುಟದಿಂದ ಕೈಬಿಡುವ ಕೆಲ ಸಚಿವರ ಹೆಸರುಗಳ ಸುಳಿವು ನೀಡಿದ್ದರು ಎನ್ನಲಾಗಿದೆ.
ಒಂದು ವೇಳೆ ಇಂದು ರಾಷ್ಟ್ರೀಯ ನಾಯಕರಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅವಕಾಶ ನೀಡಿದರೆ ಸಂಪುಟದಿಂದ ಕೈಬಿಡುವ ಸಚಿವರಿಗೆ ಇದು ಕೊನೆಯ ಸಭೆಯಾಗಲಿದೆ.
ಆದರೆ ಈವರೆಗೂ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸಂಪುಟ ಪುನಾರಚನೆಯಾಗಲಿ ಅಥವಾ ವಿಸ್ತರಣೆಯಾಗಾಗಲಿ ದೆಹಲಿ ನಾಯಕರಿಂದ ಯಾವುದೇ ಹಸಿರುನಿಶಾಸನೆ ಬಂದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ.
ಸಂಪುಟ ಪುನಾರಚನೆಗೆ ಅಸ್ತು ಎಂದರೆ ಸಂಪುಟದಿಂದ ಹಾಲಿ ನಾಲ್ವರಿಂದ ಐವರಿಗೆ ಕೋಕ್ ನೀಡುವ ಸಂಭವವಿದೆ. ಹೀಗಾಗಿ ಅವರಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಹಾಗೂ ಈವರೆಗೂ ಸಹಕಾರ ನೀಡಿದ್ದಕ್ಕೆ ಧನ್ಯವಾದ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತೆಕಂತೆಗಳು ಏನೇ ಇದ್ದರೂ ದೆಹಲಿಯಿಂದ ಬರುವ ಸಂದೇಶದ ಮೇರೆಗೆ ಎಲ್ಲ ಬೆಳವಣಿಗೆಗಳು ನಡೆಯಲಿವೆ