ಬೆಂಗಳೂರು, ನ. 27: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಸಚಿವ ಸಂಪುಟ ಸಭೆಯಲ್ಲಿಂದು ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ವಿಜಯನಗರ 31ನೇ ಜಿಲ್ಲೆ ಎಂದು ಸಚಿವ ಮಾಧುಸ್ವಾಮಿ ಅವರು ಘೋಷಣೆ ಮಾಡಿದರು.
ಈ ಮೂಲಕ ಸಚಿವ ಆನಂದ್ ಸಿಂಗ್ ಅವರ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ, ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿತ್ತು. ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಇದೀಗ ವಿಜಯನಗರ ನೂತನ ಜಿಲ್ಲೆ ಎಂದು ಅಧಿಕೃತಗೊಳಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿತ್ತು.
ಸುಮಾರು 200 ಕಿ.ಮೀ ದೂರ ಕ್ರಮಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಬೇಡಿಕೆಗೆಯನ್ನು ಮನ್ನಿಸಿ ಹೊಸ ಜಿಲ್ಲೆ ಉದಯಕ್ಕೆ ನಾಂದಿ ಹಾಡಿದೆ.* ನೂತನ ಜಿಲ್ಲೆಯ ಗಡಿಗಳ ರೂಪುರೇಷೆಗೆ ಸಚಿವ ಸಂಪುಟದಲ್ಲಿ ಸಮ್ಮತಿ ಸಿಕ್ಕಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ಹೊಸ ಜಿಲ್ಲೆ ರೂಪುಗೊಂಡಿದೆ.
* ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ,ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ತಾಲೂಕುಗಳಿರಲಿವೆ.
* ಬಳ್ಳಾರಿ 11 ಕಂದಾಯ ತಾಲೂಕು, 3 ಕಂದಾಯ ಉಪ ವಿಭಾಗಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿತ್ತು.ಈಗ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು ಹಾಗೂ ಕಂಪ್ಲಿ ತಾಲೂಕು ಉಳಿಸಿಕೊಳ್ಳಲಾಗುತ್ತದೆ.
ಆಡಳಿತ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆಗೆ ಬಿಜೆಪಿ ಸರ್ಕಾರ ಮುಂದಾಗಿದ್ದು, ಗಾಲಿ ರೆಡ್ಡಿ ಸೋದರರು ವಿರೋಧ ವ್ಯಕ್ತಪಡಿಸಿದ್ದರೆ, ಆನಂದ್ ಸಿಂಗ್ ಬಣ ಸಹಮತ ವ್ಯಕ್ತಪಡಿಸಿದ್ದರು. ಸಾರ್ವಜನಿಕರಲ್ಲೂ ಪರ-ವಿರೋಧ ಚರ್ಚೆ ಮುಂದುವರೆದಿತ್ತು.