ತುಮಕೂರು : ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಏಕಾಏಕಿ ವಶಕ್ಕೆ ಪಡೆಯುವ ಮೂಲಕ ವಿನಯ್ ಕುಲಕರ್ಣಿಗೆ ಅವಮಾನ ಮಾಡಲಾಗಿದೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ದ್ವೇಷದ ರಾಜಕೀಯ ತುಂಬಿ ತುಳುಕುತ್ತಿದೆ. ಸಹ ಸಮಾಜದ ನಾಯಕರು, ಸಮಾಜದ ಮುಖಂಡರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರು ಇದ್ದನ್ನು ಸರಿಪಡಿಸಬೇಕು ಎಂದಿದ್ದಾರೆ.
ಪ್ರಾಥಮಿಕ ವರದಿಯಲ್ಲೂ ಅವರ ಹೆಸರು ಇಲ್ಲ. ವಿನಯ್ ಕುಲಕರ್ಣಿ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಯಡಿಯೂರಪ್ಪ ಅವರ ಹೆಸರು ಕೆಡಿಸಲು ಸಹ ಸಂಚು ಮಾಡಲಾಗಿದೆ. ಸಿಎಂ ಅವರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಕೊಡದೇ ಮುಚ್ಚಿಡಲಾಗಿದೆ ಎಂದರು.
ಸಿಬಿಐ ಅಂದರೆ ಸತ್ಯಶೋಧನಾ ತಂಡ ವಿಚಾರಣೆ ಮಾಡಲು ಮುಕ್ತ ಅವಕಾಶವಿದೆ. ಆದರೆ ರೌಡಿಗಳ ರೀತಿ ಅವರನ್ನ ಎಳೆದೊಯ್ದಿದ್ದಾರೆ. ಇದು ಸರಿಯಲ್ಲ ಅನ್ನೋದು ನನ್ನ ಅಭಿಪ್ರಾಯ. ಸಿಬಿಐ ತನಿಖೆ ವೇಳೆ ನೊಟೀಸ್ ಕೊಡಬೇಕು. ಸಮುದಾಯಕ್ಕೂ ಇದು ಅಸಮಾಧಾನ ತಂದಿದೆ ಎಂದಿದ್ದಾರೆ.
ವಿನಯ ಕುಲಕರ್ಣಿ, ಬಿ.ಎಸ್.ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ಕೆಲಸ ನಡೆದಿದೆ. ಪ್ರಭಾವಿ ನಾಯಕರೊಬ್ಬರು ಇಂತಹ ಪ್ರಯತ್ನ ಮಾಡಿದ್ದಾರೆ. ಅವರ ಹೆಸರನ್ನ ನಾನು ಹೇಳಲ್ಲ. ಅವರ ಬಗ್ಗೆಯೂ ನಮಗೆ ಉತ್ತಮ ಅಭಿಪ್ರಾಯವಿದೆ ಎಂದಿದ್ದಾರೆ.