ಹೊಸದುರ್ಗ: ತಾಲ್ಲೂಕಿನ ಭಗೀರಥ ಪೀಠದಲ್ಲಿ ಜೂನ್ 3 ಮತ್ತು 4ರಂದು ಎಲ್ಲ ಸಮುದಾಯದವರನ್ನು ಒಳಗೊಂಡು ಅದ್ದೂರಿಯಾಗಿ ‘ಅಖಿಲ ಭಾರತ ಭಗೀರಥ ಜಯಂತ್ಯುತ್ಸವ’, ಭಗೀರಥ ದೇವಸ್ಥಾನ ಲೋಕಾರ್ಪಣೆ ಹಾಗೂ ಉಪ್ಪಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಜೂನ್ 3 ರಂದು ಎಲ್ಲ ಸಂತರ ಭಾವಚಿತ್ರಗಳ ಮೆರವಣಿಗೆ ಜಾನಪದ ಕಲಾ ತಂಡಗಳೊಂದಿಗೆ ನಡೆಯಲಿದೆ. ಪಟ್ಟಣದ ವೀರಭದ್ರೇಶ್ವರ ದೇವಾಲಯದಿಂದ ಆರಂಭವಾಗಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ. ಎಲ್ಲ ದಾರ್ಶನಿಕರ ಸಾಧನೆ ಸ್ಮರಿಸಲಾಗುವುದು. ಮೆರವಣಿಗೆ ನಂತರ ಭಗೀರಥ ಪೀಠದಲ್ಲಿ ತಾಲ್ಲೂಕಿನ ಎಲ್ಲಾ ಮಠಾಧೀಶರೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಜೂನ್ 4ರಂದು ಆಯೋಜಿಸಿರುವ ಜಯಂತಿ, ದೇವಸ್ಥಾನ ಲೋಕಾರ್ಪಣೆ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎ.ನಾರಾಯಣ ಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಪಿ.ಪಾಟೀಲ್, ವಿವಿಧ ಮಠಾಧೀಶರು ಭಾಗವಹಿಸುವರು ಎಂದು ತಿಳಿಸಿದರು.
‘ಲೇಪಾಕ್ಷ ಸ್ವಾಮೀಜಿ ಅವರ ವಿದ್ಯಾಮಂದಿರಗಳನ್ನು ಆರಂಭಿಸಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಭಗೀರಥ ಪೀಠದಲ್ಲಿನ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಧುರೆಯಲ್ಲಿ ಪಿಯುಸಿಯವರೆಗೆ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ಎಲ್ಲಾ ಮಕ್ಕಳಿಗೂ ವಿದ್ಯಾದಾನ ಮಾಡಲಾಗುತ್ತಿದೆ. ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲ ಸಮುದಾಯದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಯಾದವ, ನಾಯಕ, ವೀರಶೈವ ಲಿಂಗಾಯತ, ಹಡಪದ ಅಪ್ಪಣ್ಣ, ಭೋವಿಸಮಾಜ, ಆದಿಜಾಂಬವ ಸಮಾಜ, ಆರ್ಯವೈಶ್ಯ, ಕುರುಬ, ವಿಶ್ವಕರ್ಮ, ಜೈನ, ದೇವಾಂಗ, ಕುಂಬಾರ, ಈಡಿಗ, ಪಂಚಮಸಾಲಿ, ಕುಂಚಿಟಿಗ ಸಾಧು ಲಿಂಗಾಯತ, ಉಪ್ಪಾರ ಸಮಾಜದ ಗಣ್ಯರು ಭಾಗವಹಿಸಿದ್ದರು.