ಲಖನೌ: ಬಹುತೇಕ ನಿಯಂತ್ರಣಕ್ಕೆ ಬಂದಿದ್ದ ಕರೊನಾ ಸೋಂಕು ದೀಪಾವಳಿ ಹಬ್ಬದ ನಂತರ ಕೊಂಚ ಏರಿಕೆ ಕಾಣಲಾರಂಭಿಸಿದೆ. ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿನ ನಿಯಂತ್ರಣಕ್ಕೆಂದು ಉತ್ತರ ಪ್ರದೇಶ ಸರ್ಕಾರ ಕಠಿಣ ನಿಯಮವನ್ನು ಜಾರಿಗೊಳಿಸಿದೆ.
ಉತ್ತರ ಪ್ರದೇಶದಲ್ಲಿ ಬುಧವಾರದಿಂದ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ)ಯನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆಯ ಅನುಸಾರ ಇನ್ನು ಆರು ತಿಂಗಳ ಕಾಲ ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಲ್ಲಿ ಯಾವುದೇ ರೀತಿಯ ಮುಷ್ಕರ ಮಾಡುವಂತಿಲ್ಲ.
ಒಂದು ವೇಳೆ ಮುಷ್ಕರ ಮಾಡಿದರೆ ಅಂತವರಿಗೆ 1 ಸಾವಿರ ರೂಪಾಯಿ ದಂಡ ಮತ್ತು ಒಂದು ವರ್ಷದವರೆಗಿನ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎಸ್ಮಾ ಜತೆಯಲ್ಲಿ ಲಖನೌ ಜಿಲ್ಲೆಯಲ್ಲಿ ಸಿಆರ್ಪಿಸಿಯ ಸೆಕ್ಷನ್ 144 ಅನ್ನು ಜಾರಿಗೊಳಿಸಿರುವುದಾಗಿ ಜಿಲ್ಲಾ ಆಡಳಿತ ತಿಳಿಸಿದೆ.
ರಾಜ್ಯದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರೊಂದಿಗೆ ಚರ್ಚೆ ನಡೆಸಿ, ಅವರ ಅನುಮತಿಯನ್ನು ಪಡೆದ ನಂತರವೇ ಎಸ್ಮಾ ಜಾರಿಗೊಳಿಸಿರುವುದಾಗಿ ತಿಳಿಸಲಾಗಿದೆ. ಲಖನೌನಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಅನುಮತಿ ಪಡೆದಿರುವ ಕಾರ್ಯಕ್ರಮಗಳನ್ನು ಹೊರೆತುಪಡಿಸಿ ಬೇರಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಮುಷ್ಕರಗಳ ಮೇಲಿನ ನಿಷೇಧವು ಮೇ 2021ರವರೆಗೆ ಇರಲಿದೆ ಎಂದು ತಿಳಿಸಲಾಗಿದೆ.