ಬೆಳಗಾವಿ: ಇಂದಿನಿಂದ ಬೆಂಗಳೂರು- ಹುಬ್ಬಳ್ಳಿ- ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ. ಆದರೆ ಬೆಳಗಾವಿವರೆಗೂ ವಂದೇ ಭಾರತ್ ರೈಲು ಓಡದೇ ಇರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
3 ತಿಂಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿದ್ದ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯನ್ನು ಬೊಮ್ಮಾಯಿ ಸರ್ಕಾರ ಹಾವೇರಿಗೆ ಸ್ಥಳಾಂತರ ಮಾಡಿದೆ. ಉಡಾನ್ ಯೋಜನೆಯಡಿ ಅನೇಕ ವಿಮಾನ ಸೇವೆಗಳು ರದ್ದಾಗಿವೆ. ಅಲ್ಲದೇ ಹಲವಾರು ಯೋಜನೆಗಳು ಕೂಡ ಬೆಳಗಾವಿ ಕೈ ತಪ್ಪಿದೆ. ಈಗ ಮತ್ತೆ ವಂದೇ ಭಾರತ್ ವಿಚಾರದಲ್ಲೂ ಬೆಳಗಾವಿಗೆ ಅನ್ಯಾಯ ಆಗಿದೆ ಎನ್ನುವ ಮಾತು ವಾರ್ವಜನಿಕರಿಂದ ಕೇಳಿ ಬಂದಿದೆ.
ವಂದೇ ಭಾರತ್ ರೈಲನ್ನು ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಧಾರವಾಡದವರೆಗೆ ಸಂಚಾರ ಕೈಗೊಳ್ಳುವ ಯೋಜನೆಯನ್ನು 2 ವರ್ಷದ ಹಿಂದೆಯೇ ರೂಪಿಸಲಾಗಿತ್ತು. ಆದರೆ ಉತ್ತರ ಕರ್ನಾಟಕದ ಪ್ರಮುಖ ನಗರ, ರಾಜ್ಯದ ಎರಡನೇ ರಾಜಧಾನಿ ಬೆಳಗಾವಿಯವರೆಗೂ ಸಂಚಾರ ನಡೆಸುವಂತೆ ಬೆಳಗಾವಿಯ ಸಾರ್ವಜನಿಕರು ಒತ್ತಾಯಿಸಿದ್ದರು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚಳವಳಿಯ ಸ್ವರೂಪವನ್ನೂ ಪಡೆದಿತ್ತು. ಜನರ ಒತ್ತಾಯಕ್ಕೆ ಮಣಿದಿದ್ದ ಅಂದಿನ ಬೊಮ್ಮಾಯಿ ಸರ್ಕಾರ ವಂದೇ ಭಾರತ್ ರೈಲನ್ನು ಬೆಳಗಾವಿಗೂ ವಿಸ್ತರಿಸುವುದಾಗಿ ತಿಳಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಬೆಳಗಾವಿಗೆ ಬಂದಾಗ ಭರವಸೆ ಕೂಡ ನೀಡಿದ್ದರು.
ಆದರೆ ನೈಋತ್ಯ ರೈಲ್ವೇ ಇತ್ತೀಚೆಗೆ ಹೊರಡಿಸಿದ್ದ ಪ್ರಕಟಣೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಮಾರ್ಗದಲ್ಲಿ ಬೆಳಗಾವಿಯ ಹೆಸರೇ ಇಲ್ಲ. ಧಾರವಾಡವರೆಗೆ ಮಾತ್ರ ಈ ರೈಲು ಓಡಲಿದೆ. ರೈಲು ಪ್ರತಿದಿನ ಬೆಳಗ್ಗೆ 5.45ಕ್ಕೆ ಬೆಂಗಳೂರಿನಿಂದ ಹೊರಟು ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಮಧ್ಯಾಹ್ನ 12.40ಕ್ಕೆ ಧಾರವಾಡ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಟು ರಾತ್ರಿ 8.10ಕ್ಕೆ ವಾಪಸ್ ಬೆಂಗಳೂರಿಗೆ ತಲುಪಲಿದೆ ಎಂದು ನೈಋತ್ಯ ರೈಲ್ವೇ ವೇಳಾಪಟ್ಟಿಯಲ್ಲಿ ತಿಳಿಸಿದೆ.
ರಾಜ್ಯದ ಎರಡನೇ ರಾಜಧಾನಿ ಎಂದು ಕರೆಯುವ ಬೆಳಗಾವಿಯು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಜತೆಗೆ ವ್ಯಾಪಾರ, ವ್ಯವಹಾರ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ಜನ ಅಷ್ಟೇ ಅಲ್ಲದೇ ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರದ ಲಕ್ಷಾಂತರ ಜನ ಬೆಳಗಾವಿಯನ್ನೇ ಅವಲಂಭಿಸಿದ್ದಾರೆ. ಇನ್ನು, ರಾಜ್ಯದಲ್ಲೇ ಅತಿ ಹೆಚ್ಚು ಫೌಂಡ್ರಿ ಉದ್ಯಮ, 30 ಸಾವಿರಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಬೆಳಗಾವಿ ಜಿಲ್ಲೆಯಲ್ಲಿದ್ದು, ಲಕ್ಷಾಂತರ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದ ಬೆಳಗಾವಿಯಲ್ಲಿ ಹೊರ ಭಾಗದಿಂದ ಬರುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಬೆಂಗಳೂರಲ್ಲಿ ಬೆಳಗಾವಿ ಜಿಲ್ಲೆಯ ಲಕ್ಷಾಂತರ ಜನರು ನೆಲೆಸಿದ್ದಾರೆ. ಹಾಗಾಗಿ ವಂದೇ ಭಾರತ್ ರೈಲು ಸಂಚಾರವನ್ನು ಬೆಳಗಾವಿಯವರೆಗೂ ವಿಸ್ತರಿಸುವ ಅಗತ್ಯವಿದೆ ಎಂಬುದು ಇಲ್ಲಿನ ಜನರ ಆಗ್ರಹವಾಗಿತ್ತು.
CKNEWSKANNADA / BRASTACHARDARSHAN CK NEWS KANNADA