ಹೈದರಾಬಾದ್: ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ತಹಸೀಲ್ದಾರ್ ಒಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.
ತೆಲಂಗಾಣದಲ್ಲಿ ನಿನ್ನೆ ತಹಶೀಲ್ದಾರ್ವೊಬ್ಬರ ಮನೆ ಮೇಲೆ ನಡೆದ ಎಸಿಬಿ ದಾಳಿ ವೇಳೆ ಬರೋಬ್ಬರಿ 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಗದು ಹಣವನ್ನ ಜಪ್ತಿ ಮಾಡಲಾಗಿದೆ.
ಮೆಡ್ಚಲ್-ಮಲ್ಕಜ್ಗಿರಿ ಜಿಲ್ಲೆಯ ಕೀಸಾರಾ ತಹಶೀಲ್ದಾರ್ ಇರ್ವ ಬಾಲರಾಜು ನಾಗರಾಜು, ತಮ್ಮ ಮನೆಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆ ನಾಗರಾಜು ಹಾಗೂ ರಾಮಪಲ್ಲಿ ವಿಆರ್ಓ ಸಾಯಿರಾಜ್ ಹಾಗೂ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟ್ಗಳನ್ನ ಬಂಧಿಸಲಾಗಿದೆ. ತಹಶೀಲ್ದಾರ್ ನಾಗರಾಜು ಅವರ ಮನೆಯಲ್ಲಿ ಶೋಧ ಮುಂದುವರೆದಿದೆ.
ಎಸಿಬಿ ಅಧಿಕಾರಿಗಳು ಹಣ ಎಣಿಸುವ ಮಷಿನ್ನಲ್ಲಿ ಕಂತೆ ಕಂತೆ ದುಡ್ಡನ್ನ ಎಣಕೆ ಮಾಡಿದ್ದಾರೆ. ಪ್ರತಿ ಬಂಡಲ್ನಲ್ಲಿ 100 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳಿರೋದು ಕಾಣಬಹುದು.
ಒಟ್ಟಾರೆ 1.1 ಕೋಟಿ ರೂಪಾಯಿ ನಗದು ಹಣವನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ನಾಗರಾಜು ತಮ್ಮ ವ್ಯಾಪ್ತಿಯಲ್ಲಿ ಬರುವ, 28 ಎಕರೆಯ ಭೂಮಿ ವಿವಾದವನ್ನ ಬಗೆಹರಿಸಲು 2 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. 1.1 ಕೋಟಿ ಜೊತೆಗೆ ಅವರ ಮನೆಯಲ್ಲಿ ಇನ್ನೂ 28 ಲಕ್ಷ ರೂಪಾಯಿ ಕ್ಯಾಶ್ ಹಾಗೂ ಚಿನ್ನ ಪತ್ತೆಯಾಗಿದೆ. ಜೊತೆಗೆ ಕೆಲವು ಭೂಮಿ ದಾಖಲೆಗಳನ್ನ ವಶಪಡಿಸಿಕೊಳ್ಳಲಾಗಿದೆ.
ಈ ದಾಳಿಯಲ್ಲಿ ಗ್ರಾಮಾಧಿಕಾರಿ ಮತ್ತು ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರುಗಳನ್ನು ಬಂಧಿಸಲಾಗಿದೆ. ಬಂಧಿತರ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.