ಗೋಕಾಕ: ಕಳೆದ ಎರಡು ತಿಂಗಳ ಹಿಂದೆ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತಗೊಂಡು ಸಂಪೂರ್ಣ ಕೊಚ್ಚಿ ಹೋಗಿದ್ದ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿರುವ ಲೋಳಸೂರ ಸೇತುವೆಯ ದುರಸ್ತಿ ಕಾಮಗಾರಿ ಮುಕ್ತಾಯಗೊಂಡಿದ್ದು, ಸೇತುವೆಗೆ ಇಂದು ಚಾಲನೆ ನೀಡಲಾಗಿದೆ. ಇಂದಿನಿಂದ ಮತ್ತೆ ವಾಹನಗಳ ಸಂಚಾರ ಆರಂಭವಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷರು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಸೇತುವೆಯನ್ನು ಇಂದು ಉದ್ಘಾಟಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ಬಸು ದಾಸನವರ, ನಿಂಗಪ್ಪಾ ಕುರಬೇಟ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚನೆ ನೀಡಿದ್ದ ಸತೀಶ ಜಾರಕಿಹೊಳಿ:
ನಿನ್ನೆ (ಶುಕ್ರವಾರ) ಸೇತುವೆಗೆ ಭೇಟಿ ನೀಡಿದ್ದ ಸತೀಶ ಜಾರಕಿಹೊಳಿ ಅವರು ಖುದ್ದಾಗಿ ಸೇತುವೆಯನ್ನು ಪರಿಶೀಲನೆ ಮಾಡಿ, ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದಿನಿಂದ (ಶನಿವಾರ) ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸಂಪರ್ಕ ಕಡಿತದಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು:
ಜತ್ತ-ಜಾಂಬೋಟಿ ರಸ್ತೆಯಲ್ಲಿರುವ ಲೋಳಸೂರ ಸೇತುವೆಯೂ ಮಹಾರಾಷ್ಟ್ರ, ವಿಜಯಪುರ, ಅಥಣಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಾಗಿದೆ. ಪ್ರವಾಹದಿಂದ ಸೇತುವೆಯ ಸಂಪರ್ಕ ಕಡಿತಗೊಂಡಿದ್ದರಿಂದ ಕೆಲ ದಿನಗಳಿಂದ ದುರಸ್ತಿ ಕಾರ್ಯ ನಡೆಯುತ್ತಿತ್ತು.
ಸೇತುವೆ ಸಂಪರ್ಕ ಕಡಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೇರೆ ಮಾರ್ಗವಾಗಿ ಸಂಚರಿಸಬೇಕಿದ್ದರಿಂದ ಪ್ರಯಾಣಿಕರ ಜೇಬಿಗೂ ಹೊರೆಯಾಗಿತ್ತು.
ಶಾಸಕರ ಸತತ ಪ್ರಯತ್ನದಿಂದ ಶೀಘ್ರ ಕಾಮಗಾರಿ:
ಸೇತುವೆಯನ್ನು ದುರಸ್ತಿಗೊಳಿಸಲು ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ, ಆದಷ್ಟು ಬೇಗ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಪ್ರಯತ್ನ ಪಟ್ಟಿದ್ದರು. ಅವರ ನಿರಂತರ ಪ್ರಯತ್ನದಿಂದಾಗಿ ಸದ್ಯ ಸೇತುವೆ ಸಂಚಾರಕ್ಕೆ ಸಿದ್ಧವಾಗಿದೆ.
ಶಾಸಕರಾದ ಸತೀಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಜನಪರ ಕಾರ್ಯಕ್ಕೆ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
CKNEWSKANNADA / BRASTACHARDARSHAN CK NEWS KANNADA