ಗೋಕಾಕ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪರ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಬುಧವಾರ ಚುನಾವಣಾ ಪ್ರಚಾರ ನಡೆಸಿದರು.
ತಾಲೂಕಿನ ಮಾಲದಿನ್ನಿ, ಉಪ್ಪಾರಹಟ್ಟಿ, ಶಿವಾಪುರ, ಮಮದಾಪುರ, ಅಜ್ಜನಕಟ್ಟಿ ಗ್ರಾಮಗಳಲ್ಲಿ ಪ್ರಿಯಾಂಕಾ ಅವರು ಮನೆಮನೆಗೆ ತೆರಳಿ ಮತಯಾಚಿಸಿದರು.
ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ ಅವರು, “ಬೆಳಗಾವಿ ಲೋಕಸಭಾ ಕ್ಷೇತ್ರ ಅತ್ಯಂತ ದೊಡ್ಡ ಮತಕ್ಷೇತ್ರವಾಗಿದೆ. ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ಸತೀಶ ಜಾರಕಿಹೊಳಿ ಅವರಿಗೆ ಗೊತ್ತಿದೆ. ಚುನಾವಣೆಯಲ್ಲಿ ಅವರು ಆಯ್ಕೆಯಾದರೇ ಕ್ಷೇತ್ರವನ್ನು ತ್ವರಿತವಾಗಿ ಅಭಿವೃದ್ಧಿ ಮಾಡಲಿದ್ದಾರೆ. ಹೀಗಾಗಿ, ಸತೀಶ ಅವರನ್ನು ಮತದಾರರು ಬೆಂಬಲಿಸಿ, ಪ್ರಚಂಡ ಬಹುಮತದಿಂದ ಆರಿಸಿ ತರಬೇಕು” ಎಂದು ಮನವಿ ಮಾಡಿದರು.
ಎಲ್ಲ ಗ್ರಾಮಗಳಲ್ಲಿ ಪ್ರಿಯಾಂಕಾ ಅವರು ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದರು. ಮುಖಂಡರು ಹಾಗೂ ಕಾರ್ಯಕರ್ತರು ಪ್ರಿಯಾಂಕಾ ಅವರನ್ನು ಸತ್ಕರಿಸಿದರು. ಪ್ರಚಾರದುದ್ದಕ್ಕೂ ಅವರೊಂದಿಗೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.