ಬೆಳಗಾವಿ: ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯ ಕರಿಕಟ್ಟಿ ಮತ್ತು ಯಲ್ಲಾಪುರ ಗ್ರಾಮಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ, ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರು ಗುರುವಾರ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಕರಿಕಟ್ಟಿ ಹಾಗೂ ಯಲ್ಲಾಪುರ ಗ್ರಾಮಗಳು ಮತಕ್ಷೇತ್ರದ ಗುಡ್ಡಗಾಡು ಪ್ರದೇಶದಲ್ಲಿದ್ದು, ಇಲ್ಲಿ ಕಳೆದ 40 ವರ್ಷಗಳಿಂದ 10 ಮನೆಗಳಲ್ಲಿ 4 ಕುಟುಂಬಗಳು ವಾಸಿಸುತ್ತಿವೆ. ಅಭಿವೃದ್ಧಿಯಿಂದ ವಂಚಿತವಾಗಿದ್ದ ಈ ಗ್ರಾಮಗಳಲ್ಲಿ ಕಳೆದ ಕೆಲ ತಿಂಗಳ ಹಿಂದೆ ಶಾಸಕ ಸತೀಶ ಜಾರಕಿಹೊಳಿ ಅವರು ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ. ಹೀಗಾಗಿ, ಈ ಅಭಿವೃದ್ಧಿ ಕಾರ್ಯಗಳನ್ನು ಖುದ್ದು ರಾಹುಲ್ ಜಾರಕಿಹೊಳಿ ವೀಕ್ಷಿಸಿದರು.
ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ಯುವ ಮುಖಂಡ ರಾಹುಲ್ ಅವರು, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಮುಂದಿನ ದಿನಗಳಲ್ಲಿ ಇನ್ನಿತರ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಶಾಸಕರಿಗೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯರಾದ ಬಸಪ್ಪ ಗಡಕೇರಿ, ಭೀಮಪ್ಪ ಗಡಕೇರಿ ಸೇರಿ 4 ಕುಟುಂಬಗಳ ಸದಸ್ಯರು ಹಾಗೂ ಮುಖಂಡ ಮಾರುತಿ ಗುಟಗುದ್ದಿ ಇದ್ದರು.