ಬೆಳಗಾವಿ: “ಕಾಂಗ್ರೆಸ್ ಪಕ್ಷ ಅಹಿಂದ ಪರವಾಗಿಯೇ ಇದೆ. ಮತ್ತೆ ಅಹಿಂದ ಹೋರಾಟ ಮಾಡುವ ಅಗತ್ಯ ಇಲ್ಲ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ಒಳಗೊಂಡಿರುವ ಪಕ್ಷವಾಗಿದೆ. ಹೀಗಾಗಿ, ಅಹಿಂದ ಹೋರಾಟವನ್ನು ಮತ್ತೆ ಸಂಘಟಿಸುವ ಅವಶ್ಯಕತೆ ಇಲ್ಲ” ಎಂದರು.
“ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಸಮುದಾಯಗಳ ಮೀಸಲಾತಿ ಹೋರಾಟದಲ್ಲಿ ರಾಜಕೀಯವೂ ನಡೆಯುತ್ತಿದೆ ಹಾಗೂ ಷಡ್ಯಂತ್ರವೂ ಇದೆ. ಅರ್ಹವಾಗಿ ಮೀಸಲಾತಿ ಸಿಗಬೇಕಾದ ಸಮುದಾಯಗಳಿಗೆ ತೊಂದರೆಯನ್ನು ನೀಡಲಾಗುತ್ತಿದೆ” ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
“ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಮುಖ್ಯಮಂತ್ರಿಗಳು ಸಮಯ ಕೇಳಿದ್ದಾರೆ. ಅವರ ನಿರ್ಣಯಕ್ಕಾಗಿ ಕಾಯುತ್ತೇವೆ. ಮುಂದೇನು ಮಾಡಬೇಕು ಎಂಬುದನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ಘಟಪ್ರಭಾದಲ್ಲಿರುವ ನಾ.ಸು. ಹರ್ಡೀಕರ್ ಸೇವಾದಳ ಕೇಂದ್ರದಲ್ಲಿ ವಿವಿಧ ರೀತಿಯ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಕೇಂದ್ರದ ಸಾಂಕೇತಿಕ ಉದ್ಘಾಟನೆಗೆ ರಾಷ್ಟ್ರೀಯ ನಾಯಕರನ್ನು ಕರೆಸಬೇಕೆಂಬ ಯೋಚನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸದ್ಯಕ್ಕೆ ಅಲ್ಲಿ ಯಥಾಪ್ರಕಾರವಾಗಿ ಕಾರ್ಯಕ್ರಮಗಳು ನಡೆದಿವೆ” ಎಂದು ಹೇಳಿದರು.
“ಬೆಳಗಾವಿ ಲೋಕಸಭೆ ಉಪಚುನಾವಣೆಯ ಅಭ್ಯರ್ಥಿಯ ಆಯ್ಕೆಯ ಕುರಿತು ಈಗಾಗಲೇ ಸ್ಥಳೀಯ ಮಟ್ಟದ ನಾಯಕರು ಹಾಗೂ ರಾಜ್ಯಮಟ್ಟದ ನಾಯಕರು ಸಭೆಗಳನ್ನು ನಡೆಸಿ ಚರ್ಚಿಸಿದ್ದೇವೆ. ಅಂತಿಮವಾಗಿ ಕೆಲವು ಹೆಸರುಗಳನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಿಸಲಿದೆ” ಎಂದು ತಿಳಿಸಿದರು.
“ಸಿ.ಎಂ. ಇಬ್ರಾಹಿಂ ಹಾಗೂ ಪಕ್ಷದ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಪಕ್ಷದ ವರಿಷ್ಠರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ ಅವರು ಚರ್ಚಿಸಿ ಬಗೆಹರಿಸಲಿದ್ದಾರೆ” ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಜನಸಂಘದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ:
“ಕಾಲೇಜಿನಲ್ಲಿದ್ದಾಗ ಸತೀಶ ಅವರು ಎಬಿವಿಪಿ ನಾಯಕರಾಗಿದ್ದರು” ಎಂಬ ಸುದ್ದಿಗಾರರ ಪ್ರಶ್ನೆಯ ಕುರಿತು ಮಾತನಾಡಿದ ಅವರು, “ಕಾಲೇಜಿನಲ್ಲಿದ್ದಾಗ ಪ್ರತಿವರ್ಷ ಒಬ್ಬರನ್ನು ನಾಯಕರನ್ನಾಗಿ ಮಾಡುತ್ತಿದ್ದರು. ಆಗ ನಾನು ಕೂಡ ನಾಯಕನಾಗಿದ್ದೆ. ಅದಕ್ಕೂ ಬಿಜೆಪಿ, ಜನಸಂಘಕ್ಕೂ ಆಗ ಸಂಬಂಧವಿರಲಿಲ್ಲ. ಆಗಿನ ಜನಸಂಘಕ್ಕೂ, ಈಗಿನ ಜನಸಂಘಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗಿನ ಜನಸಂಘದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ” ಎಂದು ಹೇಳಿದರು.
ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡ ರಾಜು ಸೇಠ್ ಇನ್ನಿತರರು ಇದ್ದರು.