ಧಾರವಾಡ: ಅತಿವೃಷ್ಟಿಯಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಯಮಕನಮರಡಿ ಕ್ಷೇತ್ರ ಶಾಸಕ ಸತೀಶ್ ಜಾರಕಿಹೊಳಿ ನಗರದಲ್ಲಿ ಚಕ್ಕಡಿ ಏರಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಗಾಂಧಿನಗರದಿಂದ ನವಲೂರು ಸೇತುವೆವರೆಗೂ ಚಕ್ಕಡಿ ಏರಿ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಪಾಲ್ಗೊಂಡಿದ್ದರು.
ರಾಜ್ಯದ ರೈತರು ಅತಿವೃಷ್ಟಿಯಿಂದ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಬೆಳೆ ಹಾನಿಗೊಳಗಾದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಅತಿವೃಷ್ಟಿ ಬೆಳೆ ಹಾನಿಯ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಮುನಿಸಿಕೊಂಡಂತೆ ಕಾಣುತ್ತಿದೆ ಎಂದು ಕುಟುಕಿದರು.
ಬೆಳಗಾವಿ ಕಳೆದ ವರ್ಷದ ಪ್ರವಾಹಕ್ಕೆ ಸಾಕಷ್ಟು ನಲುಗಿದೆ. ಸರ್ಕಾರ ಕಣ್ತೆರೆದು ನೋಡಬೇಕು. ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಆದಷ್ಟು ಬೇಗ ಸರ್ಕಾರದಿಂದ ಪರಿಹಾರ ಕೊಡುವ ಕೆಲಸವಾಗಬೇಕು ಎಂದು ಅಂಜಲಿ ನಿಂಬಾಳ್ಕರ್ ಆಗ್ರಹಿಸಿದರು