ಬೆಳಗಾವಿ: ಮಹಿಳಾ ಸಂಘಗಳು ಮಹಿಳೆಯರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಬೇಕು ಎಂದು ಸತೀಶ ಶುಗರ್ಸ್ ನಿರ್ದೇಶಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಸಮೀಪದ ಹೊಸ ವಂಟಮುರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾಲಕ್ಷ್ಮಿ ಮಹಿಳಾ ಮಂಡಳದ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಘಟನೆಯ ಪದಾಧಿಕಾರಿಗಳು ಕೇವಲ ತಮ್ಮ ಸಂಘಟನೆಯ ಸದಸ್ಯರ ಏಳ್ಗೆಗೆ ಮಾತ್ರ ಶ್ರಮಿಸದೇ, ಗ್ರಾಮದ ಎಲ್ಲ ಮಹಿಳೆಯರ ಅಭ್ಯುದಯಕ್ಕೂ ಕೈಜೋಡಿಸಬೇಕು ಎಂದರು.
ಗೃಹಿಣಿಯರು ಕೇವಲ ಮನೆಯ ಕೆಲಸ-ಕಾರ್ಯಗಳಿಗೆ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಮಹಿಳಾ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಪ್ರತಿಭೆ ಹೊರಹಾಕಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ಶಾಸಕರಾದ ಸತೀಶ ಜಾರಕಿಹೊಳಿ ಅವರು ಎಲ್ಲ ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಆಶಾಭಾವವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಚಿಂತನೆ ಮತ್ತು ಆಲೋಚನೆಗಳನ್ನು ಜಾರಿಗೊಳಿಸಲು ತಾವು ಕೂಡ ಪ್ರಯತ್ನಿಸುವುದಾಗಿ ಪ್ರಿಯಾಂಕಾ ತಿಳಿಸಿದರು.
ಮಹಿಳಾ ಮಂಡಳದ ಅಧ್ಯಕ್ಷೆ ಕಾವೇರಿ ಮುದಗಣ್ಣವರ, ರಾಮಣ್ಣಾ ಗುಳ್ಳಿ, ಸುರೇಶ ನಾಯ್ಕ್, ಮಾರುತಿ ಮಸ್ತಿ, ಸಂಗೀತಾ ಹೆಗನಾಯಕ್, ಗೌರವ್ವ ಸತ್ಯನ್ನಗೋಳ, ಸಿದ್ದಪ್ಪ ಹೋಳೆಕರ್, ಬಸವರಾಜ ಜಡ್ಡಿ ಇದ್ದರು.