ಚಿಕ್ಕೋಡಿ: ಪದವಿ ಪೂರ್ವ ಕಲಾ ವಿಭಾಗದ ಪರೀಕ್ಷೆಯಲ್ಲಿ ಕಾವೇರಿ ಪವಾಡಿ ಮಲ್ಲಾಪುರೆ ಎಂಬ ವಿದ್ಯಾರ್ಥಿನಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿದ್ದು ವಿದ್ಯಾರ್ಥಿನಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನಂತರ ಸಾಧನೆ ಮಾಡಿದ ವಿಧ್ಯಾರ್ಥಿನಿಗೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮಾತನಾಡಿ ಗುಣಮಟ್ಟಣದ ಶಿಕ್ಷಣವು ದುಬಾರಿ ಎಂಬ ಜನಜನಿತ ನಂಬಿಕೆಯಿರುವ ಸಮಯದಲ್ಲಿ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ತಮ್ಮ ಈ ಸಾಧನೆಯು ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಸ್ಫೂರ್ತಿ ನೀಡುತ್ತದೆ. ಶಿಸ್ತು, ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ಯಾವ ಅಡತಡೆಗಳನ್ನಾದರೂ ಭೇದಿಸಿ ಸಮಾಜ ತಿರುಗಿನೋಡುವಂತೆ ಮಾಡಬಹುದು ಎಂಬುದಕ್ಕೆ ತಮ್ಮ ಸಾಧನೆ ನಿದರ್ಶನ ಎಂದು ತಿಳಿಸಿದರು.
ಲಭ್ಯವಿರುವ ಸಂಪನ್ಮೂಲಗಳನ್ನು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಇತರರಿಗೆ ತಮ್ಮ ಸಾಧನೆ ದಾರಿದೀಪವಾಗಲಿ, ತಾವು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.