ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕಾಯಕವೇ ನೈಜ ಭಕ್ತಿ, ಪರರ ಸೇವೆಯೇ ನೈಜ ಧರ್ಮ ಎಂದು ಸಾರಿದ ವಚನಕಾರ, ವಚನ ಸಾಹಿತ್ಯ ಸಂರಕ್ಷಿಸಿದ ವೀರ ಗಣಾಚಾರಿ ಮಡಿವಾಳ ಮಾಚಿದೇವ ಅವರ ಜಯಂತಿ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ ಅವರು ಮಾತನಾಡಿ ಅಂದು ಮಾಚಿದೇವರು ವಚನಸಾಹಿತ್ಯವನ್ನು ರಕ್ಷಿಸದಿದ್ದಲ್ಲಿ ಶರಣ ಧರ್ಮಕ್ಕೆ, ಶರಣ ಸಂಸ್ಕೃತಿಗೆ, ಶರಣ ಸಾಹಿತ್ಯಕ್ಕೆ ಇಂದು ಜೀವಂತಿಕೆ ಇರುತ್ತಿರಲಿಲ್ಲ. ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಪರಿವರ್ತನೆಗಾಗಿ ಸತ್ಯ, ನೇರ, ನಿಷ್ಠುರ, ನಡೆ-ನುಡಿಗಳಿಂದ ಸಮಾ ಜವನ್ನು ಜಾಗೃತಿಗೊಳಿಸಿದ ದಾರ್ಶನಿಕರಾಗಿದ್ದಾರೆ. ಇವರ ಜನನ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿ, ಅಂದಿನ ಹಿಪ್ಪರಿಗಿಯೇ ಇಂದು ಮಾಚಿದೇವರ ಹಿಪ್ಪರಗಿ (ದೇವರ ಹಿಪ್ಪರಗಿ) ಎಂದು ಪ್ರಖ್ಯಾತಿಯಾಗಿದೆ. ಇವರ ಕಾರ್ಯದಿಂದಾಗಿ ಅನೇಕ ಶರಣರಿಗೆ ಕಲ್ಯಾಣವೇ ಒದಗಿ ಬಂದಂತಾಗಿತ್ತು. ಮಾಚಿದೇವರ ವಚನ ಗಳನ್ನು ಅವಲೋಕಿಸುವಾಗ ಅವರೊಬ್ಬ ಅಪಾರ ಜ್ಞಾನ ಸಂಪತ್ತನ್ನು ಹೊಂದಿದ್ದರೆಂಬುದನ್ನು ಹಾಗೂ ಕಾಯಕದಲ್ಲಿ ನಂಬಿಕೆ, ಪ್ರಾಣಿ ಹಿಂಸೆ, ಪರನಿಂದನೆ ದ್ವೇಷಕರಾಗಿ, ಸ್ತ್ರೀ ರಕ್ಷಕನಾಗಿ ಕಾರ್ಯವನ್ನು ನಿರ್ವಹಿಸಿರುವುದನ್ನು ನಾವು ಗಮನಿಸಬಹುದಾಗಿದೆ ಎಂದರು.
ಬಸವೇಶ್ವರರ ಸಾಮಾಜಿಕ ಸುಧಾರಣೆಗಳ ಕಾಲದಲ್ಲಿ ಹಲವಾರು ಶಿವಶರಣೆಯರು ತಮ್ಮ ತಮ್ಮ ಅನುಭವಗಳನ್ನು ವಚನಗಳ ಮುಖೇನ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ರಚಿಸಿ ಪ್ರಚಾರ ಮಾಡುತ್ತಿದ್ದರು. ಇದರಿಂದ ಜನರು ಎಚ್ಚೆತ್ತುಕೊಂಡು ಮೂಢನಂಬಿಕೆ ಮತ್ತು ಅಸ್ಪೃಶ್ಯತೆಯಿಂದ ಹೊರಬರುತ್ತಿದ್ದರು ಮತ್ತು ತಾವು ರಚಿಸಿದ ವಚನಗಳನ್ನು ಬರವಣಿಗೆ ಮುಖೇನ ಶೇಖರಿಸಿಡುತ್ತಿದ್ದರು. ಇದನ್ನು ಸಹಿಸದ ಬಿಜ್ಜಳನು ವಚನ ಸಾಹಿತ್ಯಗಳನ್ನು ಧ್ವಂಸ ಮಾಡಲು ಮುಂದಾದಾಗ ಮಾಚಿದೇವರು ಬಿಜ್ಜಳನ ವಿರುದ್ದ ಹೋರಾಡಿ ಲಕ್ಷಾಂತರ ವಚನಗಳನ್ನು ಸಂರಕ್ಷಿಸಿದ ಖ್ಯಾತಿಗೆ ಪಾತ್ರರಾಗಿದ್ದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರು ವ್ಹಿ.ಆರ್.ಪರಸನ್ನವರ, ಪಾಂಡು ರಂಗಸುಭೆ, ವಿನೋದ್ ಡೊಂಗರೆ, ಪ್ರಕಾಶ್ ಬಸ್ಸಾಪುರೆ, ಮಾರುತಿ ಗುಟಗುದ್ದಿ, ಪ್ರವೀಣ್ ಗುಡ್ಡಾಕಾಯ ಹಾಗೂ ಹಿಲ್ ಗಾರ್ಡನ್ ಸಿಬ್ಬಂದಿಗಳು, ಇತರರು ಇದ್ದರು