ಬೆಳಗಾವಿ: ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಸಹಕಾರಿ ರಂಗ ಶಕ್ತಿಯುತ್ತವಾಗಿ ನಿಂತಿದೆ. ಸಹಕಾರಿ ರಂಗ ಇನ್ನಷ್ಟು ಗಟ್ಟಿಯಾಗಿ ನಿಂತಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಜೆ.ಎನ್.ಎಂ.ಸಿ. ಆವರಣ, ಡಾ. ಬಿ.ಎಸ್. ಜಿರಗಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇವರ ವತಿಯಿಂದ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಮಾರೋಪ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು, ರೈತರು ನೆಮ್ಮದಿಯಾಗಿ ಜೀವನ ಸಾಗಿಸುತ್ತಿರುವುದಕ್ಕೆ ಕಾರಣವೇ ಸಹಕಾರ ಬ್ಯಾಂಕ್‌ಗಳು , ಈ ಬ್ಯಾಂಕ್‌ಗಳ ಬಗ್ಗೆ ಅಪ್ರಚಾರ ಬೇಡ. ಸಹಕಾರಿ ಸಂಘದ ತವರು ಜಿಲ್ಲೆ ಬೆಳಗಾವಿಯಲ್ಲಿ ಸಹಕಾರಿ ರಂಗ ಇನ್ನೂ ಹೆಚ್ಚಿನ ಸೇವೆಯನ್ನು ಆರಂಭಿಸಲಿ, ಜಿಲ್ಲೆಯಲ್ಲಿ ಸಹಕಾರಿ ಕಾಲೇಜ್ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ಭರವಸೆ ನೀಡಿದರು.
ಸಹಕಾರ ಪ್ರಯತ್ನದಿಂದ ರಾಜ್ಯ ಒಳಗೊಂಡಂತೆ ಹುಕ್ಕೇರಿಯಲ್ಲಿ ಸಹಕಾರಿ ವಿದ್ಯುತ್ ಶಕ್ತಿ ಕೇಂದ್ರವಾಗಿದೆ, ಜಿಲ್ಲೆಯ ಚಂದರಗಿಯಲ್ಲಿ ಕ್ರೀಡಾ ಶಾಲೆ ದೇಶದಲ್ಲಿ ಮಾದರಿಯಾಗಿದೆ. ಘಟಪ್ರಭಾದಲ್ಲಿ ಅತ್ಯುತ್ತಮವಾದ ವೈದ್ಯಕೀಯ ಆಸ್ಪತ್ರೆ, ಆಯುರ್ವೇದಿಕ ವೈದ್ಯಕೀಯಮಹಾವಿದ್ಯಾಲಯ ತಲೆ ಎತ್ತಿದೆ. ಈ ಭಾಗದ ಅಭಿವೃದ್ಧಿಗೆ ಸಹಕಾರ ಸಾಕಷ್ಟು ಶ್ರಮಿಸಿರುವುದು ಹೆಮ್ಮೆಯ ವಿಷಯ, ಸಹಕಾರ ರಂಗ ಇನ್ನಷ್ಟು ಗಟ್ಟಿಯಾದಾಗ ಮಾತ್ರ ಹೆಚ್ಚಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಹಕಾರ ರಂಗದಲ್ಲಿ ಸದಸ್ಯತ್ವ ಕಡ್ಡಾಯವಾಗಬೇಕಿದೆ. 30 ವರ್ಷಗಳು ಕಳೆದರೂ ಸದಸ್ಯತ್ವ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿಲ್ಲ. ಅರ್ಹರಿಗೆ ಸಾಲ ಸಿಗಬೇಕು, ಶೇ. 3% ರಷ್ಟು ಜನರು ಸಾಲ ಸೌಲಭ್ಯ ಪಡೆದುಕೊಳ್ಳುವಲ್ಲಿ ಹತ್ತಿರ ಕೂಡ ಸುಳಿದಿಲ್ಲ. ಅವರಿಗೆ ಸರಳವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರಿ ಸಚಿವರು ಪ್ರಯತ್ನಕ್ಕೆ ಮುಂದಾಗಬೇಕು. ಸರ್ಕಾರದ ಸಂಪುಟದ ಗಟ್ಟಿ ಸಚಿವರು ನೀವೆ.. ನಿಮ್ಮ ನಿರ್ಧಾರದಿಂದ ಸಹಕಾರ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೆ.ಎನ್. ರಾಜಣ್ಣ, ಕೆಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ , ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಂಸದ ಈರಣ್ಣ ಕಡಾಡಿ, ಶಾಸಕ ಲಕ್ಷ್ಮಣ ಸಂ. ಸವದಿ , ಶಾಸಕ ಆಸಿಫ್ (ರಾಜು) ಸೇಠ, ಶಾಸಕ ದುರ್ಯೋಧನ ಐಹೊಳೆ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ವಿಧಾನಪರಿಷತ್ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಮಾಜಿ ಎಂಎಲ್ ಸಿ ಮಹಾತೇಂಶ ಕವಟಿಗಿಮಠ, ಸಂಯುಕ್ತ ಸಹಕಾರಿಯ ನಿರ್ದೇಕರಾದ ಜಗದೀಶ ಕವಟಗಿಮಠ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡ್ , ಮಹಾಂತೇಶ ಕಾಗೆ, ಬಿ.ಡಿ. ಪಾಟೀಲ, ಕಲ್ಲಪ್ಪ ಓಬಣ್ಣಗೋಳ್, ಡಾ. ಸುರೇಶ ಗೌಡ, ರವೀಂದ್ರ ಪ. ಪಾಟೀಲ ಇತರರು ಇದ್ದರು.