ಬೆಳಗಾವಿ: ಇಲ್ಲಿನ ರಾಮತೀರ್ಥನಗರದಲ್ಲಿ ಸೋಮವಾರ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಬೆಳಗಾವಿಗೆ ಸ್ವಲ್ಪ ತಡವಾದರೂ ಅತ್ಯುತ್ತಮವಾದ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಬಲವಾದ ಸಾರ್ವಜನಿಕ ಬೇಡಿಕೆ ಈಡೇರಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ನಮ್ಮ ಕ್ರೀಡಾಪಟುಗಳಿಗೆ ವೇದಿಕೆಯನ್ನು ಒದಗಿಸುವುದು ಬಹಳ ಮುಖ್ಯ. ಹೀಗಾಗಿ ಈ ಅಗತ್ಯವನ್ನು ಮನಗಂಡು ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ಸರ್ಕಾರ ಬಂದ ತಕ್ಷಣವೇ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿಯನ್ನು ನೀಡಲಾಗಿದೆ. ಮೂರು ವರ್ಷದಲ್ಲಿ ಸುಸಜ್ಜಿತವಾದ ಭವ್ಯ ಕ್ರೀಡಾಂಗಣ ಆರಂಭವಾಗಲಿದೆ ಎಂದು ಹೇಳಿದರು.
ಸ್ಥಳೀಯ ನಿವಾಸಿಗಳ ಸಹಕಾರದಿಂದ ಮಹತ್ವದ ಕಾರ್ಯ ಕೈಗೊಳ್ಳಲು ಅನುಕೂಲವಾಗಿದೆ. ಭವ್ಯ ದೇವಸ್ಥಾನ ಕೂಡ ನಿರ್ಮಾಣವಾಗಲಿದೆ. ಸ್ಥಳೀಯ ಶಾಸಕರ ಜೊತೆ ಒಂದು ಸುತ್ತಿನ ಚರ್ಚೆ ನಡೆಸಿ ಸ್ಥಳೀಯ ನಿವಾಸಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಅನೂಕೂಲವಾಗುವಂತೆ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕ್ರೀಡಾಂಗಣಕ್ಕೆ ಅನುಕೂಲವಾಗುವಂತೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಈಗಾಗಲೇ ರಾಮತೀರ್ಥನಗರ ಬೆಳಗಾವಿಯ ಸರ್ವೆ ನಂ 633,622, 623ರಲ್ಲಿ 9.26 ಎಕರೆ ಭೂಮಿಯನ್ನು ಮಂಜೂರು ಆಗಿದೆ. ಇನ್ನೂ 6 ಎಕರೆ ಜಾಗವನ್ನು ನೀಡಲು ಇಲ್ಲಿನ ಸ್ಥಳೀಯರ ಒಮ್ಮತವಿದೆ. ಹಂತ-ಹಂತವಾಗಿ ಕಾಮಗಾರಿ ನಡೆಯಲಿದೆ ಎಂದರು.
ಇಲ್ಲಿನ ವಿದ್ಯಾರ್ಥಿಗಳು ಪಾಠದ ಜೊತೆ ಆಟದಲ್ಲಿಯೂ ತನ್ನ ಪ್ರತಿಭೆಯನ್ನು ತೋರಿಸಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆಯಲಿ ಎಂದು ಶುಭಹಾರೈಸಿದರು.
ಈ ವೇಳೆ ಶಾಸಕ ರಾಜು( ಆಸೀಪ್ ಸೇಠ) ಅವರು ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಸುಮಾರು 15 ಎಕರೆ ಜಾಗದಲ್ಲಿ ಅತ್ಯುತ್ತವಾದ ಜಿಲ್ಲಾ ಕ್ರೀಡಾಂಗಣ ನಿರ್ಮಾಣವಾಗಲಿದೆ. ಸಚಿವ ಸತೀಶ ಜಾರಕಿಹೊಳಿ ಅವರು ಮುತುರ್ವಜಿ ವಹಿಸಿ ಕ್ರೀಡಾಂಗಣ ನಿರ್ಮಾಣಕ್ಕೆ 50 ಕೋಟಿ. ರೂ. ತ್ವರಿತವಾಗಿ ಬಿಡುಗಡೆ ಮಾಡಿದ್ದಾರೆ. ಕ್ರೀಡಾಂಗಣ ನಿರ್ಮಾಣಕ್ಕೆ ಇನ್ನೂ ಸಚಿವರ ಬಳಿ 150 ಕೋಟಿ ರೂ. ಬೇಡಿಕೆ ಇಡಲಾಗಿದೆ. ಸಚಿವರು ಎಲ್ಲಾ ರೀತಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮೂರು ವರ್ಷದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ಈ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ರಾಮತೀರ್ಥ ನಗರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕ್ರೀಡೆಗೆ ಸಚಿವರು ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ದೊಡ್ಡ ದೇವಾಲಯ ನಿರ್ಮಾಣಕ್ಕೆ ಎಲ್ಲಾ ಸಕಲ ವ್ಯವಸ್ಥೆ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಮ್ಮಹದ್ ರೋಷನ್ , ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್, ಎಸ್ಪಿ ಭೀಮಾ ಶಂಕರ ಗುಳೇದ, ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಯುವಸಬಲೀಕರಣ, ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಬಿ. ಶ್ರೀನಿವಾಸ್ , ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೊಬರದ, ಹಾಗೂ ಅಧಿಕಾರಿಗಳು, ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ನಗರ ಸೇವಕ ಹನುಮಂತ ಕೊಂಗಾಲಿ, ಸಿ. ಕೆ ಜೋರಾಪುರ ಹಾಗೂ ಇತರರು ಇದ್ದರು.