Breaking News

ಚಿಕ್ಕೋಡಿ‌ ತಾಯಿ ಮಕ್ಕಳ ಆಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಕ್ರಮ‌ ಜರುಗಿಸಿ: ಸಚಿವ ಸತೀಶ ಜಾರಕಿಹೊಳಿ


ಬೆಳಗಾವಿ(ಕರ್ನಾಟಕ ವಾರ್ತೆ) ಜು.12: ಚಿಕ್ಕೋಡಿಯಲ್ಲಿ ನಿರ್ಮಾಣವಾದಂತಹ ತಾಯಿ‌ ಮಕ್ಕಳ ಆಸ್ಪತ್ರೆಯನ್ನು ಬರುವ ಅಗಸ್ಟ 15 ರಂದು ಲೊಕಾರ್ಪಣೆಗೊಳಿಸಲು ಅಗತ್ಯ ಕ್ರಮ‌ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಶುಕ್ರವಾರ (ಜು.12) ಜರುಗಿದ 2024-25ನೇ ಸಾಲಿನ ಪ್ರಥಮ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಈಗಾಗಲೇ ಚಿಕ್ಕೋಡಿಯಲ್ಲಿ ನಿರ್ಮಾಣವಾದಂತಹ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ವೈದ್ಯಕೀಯ ಸಿಬ್ಬಂದಿ ನೇಮಕ ಆಗಿರುವುದರಿಂದ ಆಸ್ಪತ್ರೆಯನ್ನು ಬರುವ ಆಗಸ್ಟ್ 15 ರಂದು ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

 

ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಒದಗಿಸಲಾಗಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಕೂಡಲೇ ಸಾರ್ವಜನಿಕ ಬಳಕೆಗೆ ಒದಗಿಸಬೇಕು.

 

ರಾಜ್ಯಾದ್ಯಂತ ಡೆಂಗ್ಯೂ‌ ಜ್ವರದ ಹಾವಳಿ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಅಗತ್ಯ ಕ್ರಮ‌ವಹಿಸಬೇಕು. ಜಿಲ್ಲೆಯ ಎಲ್ಲ ಆಸ್ಪತ್ರಗಳಿಗೆ ಡೆಂಗ್ಯೂ ಪರೀಕ್ಷಾ‌ ಕಿಟ್ ಗಳನ್ನು ವಿತರಿಸಬೇಕು. ಅಲ್ಲದೇ ಡೆಂಗ್ಯೂ ಜ್ವರದಿಂದ ಬಳಲುವ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸುವದರ ಜೊತೆಗೆ ಡೆಂಗ್ಯೂ ಜ್ವರಕ್ಕೆ ಬೇಕಾಗುವಂತಹ ಅಗತ್ಯದ ಔಷಧಿಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು.

 

ಡೆಂಗ್ಯೂ‌ ಜ್ವರದ ಲಕ್ಷಣಗಳು‌, ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಮುಂದಾಗುವಂತೆ ಆರೋಗ್ಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. 

 

ತಕ್ಷಣ ಡೆಸ್ಕ್ ಖರೀದಿಗೆ ಸಚಿವರ ಸೂಚನೆ:

 

ಡೆಸ್ಕ್ ಗಳ‌ ಖರೀದಿಗೆ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ‌ ಮಾಡಿಕೊಂಡು ಜಿಲ್ಲೆಯಾದ್ಯಂತ ಅಗತ್ಯವಿರುವ ಶಾಲೆಗಳಿಗೆ ಡೆಸ್ಕ್ ಗಳನ್ನು ಒದಗಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಾರಕಿಹೊಳಿ ಅವರು,

ಶೈಕ್ಷಣಿಕ ಪ್ರಗತಿಗಾಗಿ ಶೀಘ್ರವೇ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರನ್ನು ನೇಮಿಸಲಾಗುವುದು ಎಂದರು.

 

ಪ್ರಸಕ್ತ ಸಾಲಿನಲ್ಲಿ‌ ಮುಂಗಾರು‌ ಮಳೆ ಉತ್ತಮವಾಗಿ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ‌ ಹಾಗೂ ರಸಗೊಬ್ಬರದ ಕೊರತೆ ಆಗದಂತೆ‌ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತಹ ರೈತ ಕುಟುಂಬಗಳಿಗೆ ಶೀಘ್ರವೇ ಪರಿಹಾರ‌ ಒದಗಿಸಬೇಕು. 

ಜಿಲ್ಲೆಯಲ್ಲಿ‌ ಕೈಗೊಳ್ಳಲಾದ‌ ಜಲ ಜೀವನ‌ ಮಿಷನ ಯೋಜನೆಯಡಿ ಅಪೂರ್ಣ ಕಾಮಗಾರಿ ಹಾಗೂ‌ ಸಮರ್ಪಕ‌ ನೀರು ಪೂರೈಕೆ ಆಗುತ್ತಿರುವ ಕುರಿತು ಪರಿಶೀಲಿಸಲು ತಿಳಿಸಿದರು.

 

ಜಿಲ್ಲೆಯಲ್ಲಿ ಹೊಸದಾಗಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಮಾಹಿತಿ ಪಡೆದ ಅವರು, ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಬೇಕಾದಂತಹ ಜಾಗೆಯನ್ನು ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು‌ ಶೀಘ್ರವೆ ಪೂರ್ಣಗೊಳಿಸಬೇಕು. ರೈತರಿಗೆ ಅನಾನೂಕುಲ ಆಗದಂತೆ ದುರಸ್ತಿಗೊಳಪಟ್ಟ ವಿದ್ಯುತ್ ಪರಿವರ್ತಕಗಳನ್ನು ಶೀಘ್ರವೆ ಬದಲಾಯಿಸಲು ಕ್ರಮ‌ವಹಿಸಬೇಕು.

 

ರಾಯಬಾಗ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈ ಸಂಬಂಧ ಸ್ಥಳೀಯ ಶಾಸಕರ ಜೊತೆಗೆ ನಿರಂತರ ಸಮನ್ವಯ ಸಾಧಿಸುವ ಮೂಲಕ ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕು. ಈ ಕುರಿತು ರಾಯಬಾಗದಲ್ಲಿ ಶೀಘ್ರವೆ ಸಭೆ ಜರುಗಿಸಲಾಗುವದು. 

 

ನೆರೆಯ‌ ಮಹರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ನದಿ‌ ಪಾತ್ರದ ಗ್ರಾಮಗಳಲ್ಲಿ ಎದುರಾಗಬಹುದಾದ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ‌ ಕುರಿತು ಸಾರ್ವಜನಿಕರಲ್ಲಿ ಮುಂಜಾಗೃತಾ ಕ್ರಮವಾಗಿ ಅರಿವು ಮೂಡಿಸಬೇಕು ಎಂದು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸೂಚನೆ ನೀಡಿದರು.

 

ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ್ ಹುಕ್ಕೇರಿ ಅವರು‌ ಮಾತನಾಡಿ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವದರ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಪ್ರಯೋಗ ಮಾಡುವಂತೆ ಸಭೆಗೆ ಮಾಹಿತಿ ನೀಡಿದರು. 

 

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2022-23 ನೇ ಸಾಲಿನಲ್ಲಿ ಡೆಸಕ್ ಖರೀದಿಗೆ ಟೆಂಡರ ಕರೆಯಲಾಗಿದ್ದರೂ ಸಹ ಇದುವರೆ ಡೆಸ್ಕ್ ಪೂರೈಕೆ ಆಗದಿರುವ‌‌ ಕುರಿತು ಸಭೆಯ‌ ಗಮನಕ್ಕೆ ತಂದು ಟೆಂಡರ್ ಷರತ್ತುಗಳ ಅನುಸಾರ ಕಾಲಮಿತಿಯಲ್ಲಿ ಡೆಸ್ಕ್ ಪೂರೈಸಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಚಿಕ್ಕೋಡಿಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಲಿಫ್ಟ್ ಇಲ್ಲ ಎಂಬ ನೆಪ ಹೇಳಿ ಆಸ್ಪತ್ರೆ ಲೋಕಾರ್ಪಣೆ ಮಾಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಆಗಸ್ಟ್ 15 ರಂದು ಚಿಕ್ಕೋಡಿಯ ತಾಯಿ ಮಕ್ಕಳ ಆಸ್ಪತ್ರೆಯ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು.

 

ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಭರಮಗೌಡ(ರಾಜು) ಕಾಗೆ ಅವರು ಮಾತನಾಡಿ, ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೇವಲ ಮೇಲ್ದರ್ಜೆಗೆ ಎರಿಸುವುದರಿಂದ‌ ಪ್ರಯೋಜನೆ ಆಗುವುದಿಲ್ಲ. ಮೇಲ್ದರ್ಜೆಗೆ ಎರಿಸುವ ಪ್ರಾಥಮಿಕ ಆರೋಗ್ಯ‌‌ ಕೇಂದ್ರಗಳಿಗೆ ಅಗತ್ಯದ ವೈದ್ಯರ ಹಾಗೂ ಸಿಬ್ಬಂದಿಗಳ‌ ನಿಯೋಜನೆ ಮಾಡುವಂತಹ ಕಾರ್ಯವಾಗಬೇಕು ಎಂದು ಸಭೆಯ‌ ಗಮನಕ್ಕೆ ತಂದರು.  

 

ಕೆಲ‌ ಶಾಲಾ ಶಿಕ್ಷಕರು ದಿನನಿತ್ಯ ಶಾಲೆಗೆ ಮಧ್ಯಪಾನ ಮಾಡಿ ಬರುತ್ತಿರುವ ಕುರಿತು ದೂರುಗಳು ಬಂದಿದ್ದು ಇಂತಹ ಶಿಕ್ಷಕರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. ಶಿಕ್ಷಕರ ಕೊರತೆಯಿಂದ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ‌ ಬೀರುತ್ತಿರುವುದರಿಂದ ಶಿಕ್ಷಕರ ನೇಮಕಾತಿ ಪ್ರಸ್ತಾವವನ್ನು ಸಲ್ಲಿಸುವುದರ‌ ಜತೆಗೆ ಶಿಕ್ಷಕರ‌ ನೇಮಕಾತಿಗೆ ಸರಕಾರದ ಮೇಲೆ ಒತ್ತಡ ಹೇರಬೇಕಿದೆ. 

 

ಜಲಜೀವನ ಮಿಷನ ಯೋಜನೆಯಡಿ ಕಾಮಗಾರಿಗಳು ಅಪೂರ್ಣಗೊಂಡಿದ್ದು, ಈ ಯೋಜನೆಗಡಿ ಇನ್ನೂ ಕೆಲ ಗ್ರಾಮಗಳಲ್ಲಿ ನೀರು‌ ಪೂರೈಕೆ ಆಗದಿರುವ‌ ಕುರಿತು ಅಸಮಾಧಾನ ವ್ಯಕ್ತ‌ಪಡಿಸಿ ಈ ಕುರಿತು‌ ಪರೀಶಿಲಿಸಿವಂತೆ ಶಾಸಕ ಕಾಗೆ ಹೇಳಿದರು.

 

ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಸಮರ್ಪಕ ಪರಿಹಾರ ವಿತರಣೆ ಮಾಡಬೇಕು ಎಂದರು.

ರೈತರು ತಮ್ಮ ಜಮೀನುಗಳಲ್ಲಿ ಗಾಣದಮನೆ, ಗೊಡೌನ್ ಮತ್ತಿತರ ಮೂಲಸೌಕರ್ಯ ಮಾಡಿಕೊಳ್ಳಬೇಕಾದರೆ ಬ್ಯಾಂಕ್ ಸಾಲಸೌಲಭ್ಯ ಒದಗಿಸಲು ಎನ್.ಎ. ಮಾಡುವುದು ಅಗತ್ಯವಿದೆ ಎಂದು ಬ್ಯಾಂಕುಗಳು ಸೌಲಭ್ಯ ವಿತರಣೆ ಮಾಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಪಂ ಸಿಇಓ ತಿಳಿಸಿದರು.

 

ಆಸಿಫ್(ರಾಜು) ಸೇಠ್, ಬಿಮ್ಸ್ ನಲ್ಲಿ ವೈದ್ಯರು, ಶುಶ್ರೂಷಕಿಯರು ಹಾಗೂ ತಾಂತ್ರಿಕ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ಒತ್ತಾಯಿಸಿದರು.

 

ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಅವರು, ಮಾತನಾಡಿ, ಬಿಮ್ಸ್ ಹಾಸಿಗೆ ಪ್ರಮಾಣವನ್ನು ಹೆಚ್ಚಿಸುವುದರ ಜತೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಚಿಕ್ಕೋಡಿಗೆ ಮತ್ತೊಂದು ಜಿಲ್ಲಾ ಆಸ್ಪತ್ರೆ ಸ್ಥಾಪಿಸಬೇಕು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಾಸಿಗೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಯಾದವ ಒತ್ತಾಯಿಸಿದರು.

 

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಮಾತನಾಡಿ ಡೆಂಗ್ಯೂ‌ ನಿಯಂತ್ರಣಕ್ಕೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ‌ ಪಂಚಾತಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ‌ ಸ್ವಚ್ಚತೆಗೆ ಕ್ರಮ‌ವಹಿಸುವಂತೆ ಸೂಚಿಸಲಾಗಿದೆ. ಕಳೆದ‌ಮೂರು ದಿನಗಳಲ್ಕಿ 350 ಪರೀಕ್ಷೆಗಳು ಜರುಗಿದ್ದು ಇದರಲ್ಲಿ 3 ಪ್ರಕರಣಗಳು ಧೃಡಪಟ್ಟಿರುತ್ತವೆ ಎಂದು ತಿಳಿಸಿದರು.

 

ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಕ್ಕಾಡಳಿತ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಅಗತ್ಯದ ರಕ್ಷಣಾ ಪರಿಕರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಇದರ ಜೊತೆಗೆ ಕಾಳಜಿ ಕೇಂದ್ರಗಳಲ್ಲಿನ ಮೂಲಭೂತ ಸೌಲಭ್ಯಗಳ‌ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಸಂಭಂದಿಸಿದ ಅಧಿಕಾರಿಗಳುಗೆ ಸೂಚುಸಲಾಗಿದೆ ಎಂದು ತಿಳಿಸಿದರು.

 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಕೆಡಿಪಿ ಸಭೆಯನ್ನು ನಿರ್ವಹಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಅನುಕೂಲವಾಗುವಂತೆ ಎ.ಬಿ.ಸಿ. ಕೆಟಗರಿಗಳನ್ನು ಸೃಷ್ಟಿಸಿ ಆಯಾ ಕೆಟಗರಿ ಅನುಸಾರ ವೈದ್ಯರನ್ನು ಪಿಎಚ್ ಸಿ‌ ಹಾಗೂ ಸಿಎಚ್ ಸಿ ಗಳಿಗೆ ನಿಯೋಜಿಸಬಹುದು ಎಂಬ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದರು.

ಶಾಲೆಗಳಲ್ಲಿ ಆಶಿಸ್ತು ತೋರುವಂತಹ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವದು. ಅಲ್ಲದೇ ಪ್ರತಿ‌ ತಿಂಗಳ‌ ಮೂರನೇ ಶನಿವಾರದಂದು ಎಲ್ಲ ಶಾಲೆಗಳಲ್ಲಿ‌ ಪಾಲಕರ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

 

ಜಿಲ್ಲಾ ಆರೋಗ್ಯ‌ಮತ್ತು ಕುಟುಂಬ‌ ಕಲ್ಯಾಣಾಧಿಕಾರಿ ಮಾತನಾಡಿ ಜಿಲ್ಲೆಯಲ್ಲಿ ಡೆಂಗ್ಯೂ‌ ನಿಯಂತ್ರಣಕ್ಕೆ ಕ್ರಮ‌ವಹಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 209 ಪ್ರಕರಣಗಳು ಬೆಳಕಿಗೆ ಬಂದಿರುತ್ತವೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು‌ ನಿಯೋಜಿಸುವದರ‌ ಮೂಲಕ ಹೆಚ್ಚಿನ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ‌ ನೀಡಿದರು.

 

ಸಭೆಯಲ್ಲಿ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ, ನಗರ ಪೊಲಿಸ್ ಆಯುಕ್ತ ಯಡಾ‌ ಮಾರ್ಟಿನ ಮಾರ್ನಬ್ಯಾಂಗ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ವಿಧಾನ ಸಭಾ, ವಿಧಾನ ಪರಿಷತ ಸದಸ್ಯರುಗಳು, ನಾಮ ನಿರ್ದೆಶನ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

 

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಗ್ರಾಮೀಣ ಪ್ರದೇಶದಲ್ಲಿ 500 ಮಹಿಳಾ‌ ಸ್ವಸಹಾಯ ಸಂಘಗಳ‌ ರಚನೆಯಾಗಿರುತ್ತವೆ.

ಸದರಿ ಮಹಿಳಾ ಸ್ವಯಂ ಸಂಘಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.

ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಕೆಲಸ‌ ಮಾಡಲು‌ ಅನುಕೂಲವಾಗುವಂತೆ ಮಾನಿಟರಿಂಗ್ ಆ‌್ಯಪ್ “C-TARA”ಟಾಸ್ಕ ಅಸೈನಮೆಂಟ್ ಮತ್ತು ರಿವ್ಯೂವ್ ಅಪ್ಲಿಕೇಶನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

***


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ