Breaking News

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸ್ವ-ಕ್ಷೇತ್ರದಲ್ಲೇ ಶಕ್ತಿ ಪ್ರದರ್ಶಿಸಿದ ಎನ್‌ಸಿಪಿ- ವಿಜಯ ಸಂಕಲ್ಪ ಸಮಾವೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಭಾಗಿ- ಕೈಗೆ ಬಲ ತುಂಬಿದ ಪವಾರ್‌


ಬೆಳಗಾವಿ: ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಮಹತ್ವದ್ದಾಗಿದ್ದು, ವಿಶ್ವದ ಗಮನ ಈ ಚುನಾವಣೆಯತ್ತ ನೆಟ್ಟಿದೆ. ಸ್ವಾತಂತ್ರ್ಯಾ ನಂತರ ದೇಶದ ಮೊದಲ ಪ್ರಧಾನಿಗಳಾಗಿದ್ದ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಕಾಲದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿತ್ತು. ಆದರೆ ಈಗ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ಸರ್ವಾಧಿಕಾರವನ್ನು ತರುತ್ತಿದ್ದು, ಪ್ರಧಾನಿ ಮೋದಿ ಭರವಸೆ ಮರುಭೂಮಿಯ ದಾಹವಾಗಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಹೇಳಿದರು.

ನಿಪ್ಪಾಣಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಎನ್‌ಸಿಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಮನುಷ್ಯನಿಗೆ ಬದುಕುವ ಹಕ್ಕಿದೆ. 2014ರಲ್ಲಿ ಮೋದಿ ಸರಕಾರ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಅವರು ಅನುಸರಿಸಲಿಲ್ಲ. 2014ರಲ್ಲಿ 71 ರೂ. ಇದ್ದ ಪೆಟ್ರೋಲ್ ಬೆಲೆ ಈಗ 100 ರೂಪಾಯಿಯಾಗಿದೆ. ಗೃಹಬಳಕೆಯ ಗ್ಯಾಸ್ ಬೆಲೆ 410 ರೂಪಾಯಿಯಿಂದ 1100 ರೂ.ಗೆ ಏರಿಕೆಯಾಗಿದೆ. ಇದರಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಅಲ್ಲದೇ ಬಿಜೆಪಿ ಸರ್ಕಾರ ಅನೇಕ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅನೇಕ ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಮೋದಿಯವರ ಭರವಸೆ ಮೋಸದಿಂದ ಕೂಡಿದ್ದು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇದರಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

 

 ಮೋದಿ ಸರ್ಕಾರ ದೊಡ್ಡ ಉದ್ಯಮಿಗಳಿಗೆ ಉಣಬಡಿಸುವ ಕೆಲಸ ಮಾಡುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಂತಹ ಅನೇಕ ಸರ್ಕಾರಗಳನ್ನು ಮತ್ತು ನಾಯಕರನ್ನು ಜೈಲಿಗೆ ಹಾಕುವ ಕೆಲಸವನ್ನು ಮಾಡಿ ಬಿಜೆಪಿಯು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ ಕರ್ನಾಟಕ ಮತ್ತು ತೆಲಂಗಾಣದ ಕಾಂಗ್ರೆಸ್ ಸರಕಾರವು ಭರವಸೆಯಂತೆ ಐದು ಖಾತರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ದೇಶಕ್ಕೆ ಹೊಸ ಮಾದರಿಯನ್ನು ಸೃಷ್ಟಿಸಿದೆ. ಈ ಬಾರಿ ಚುನಾವಣೆಯಲ್ಲಿ ಭಾರತ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯಕವಾಗಿದೆ. ಆದ್ದರಿಂದ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

 

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಮಾತನಾಡಿ, ಎನ್‌ಸಿಪಿ ಮುಖಂಡ ಉತ್ತಮ ಪಾಟೀಲ್‌ ನೇತೃತ್ವದಲ್ಲಿ ಇಂದು ನಿಪ್ಪಾಣಿ ಪಟ್ಟಣದಲ್ಲಿ ಸಭೆ ಆಯೋಜಿಸಿದ್ದು, ಎನ್‌ಸಿಪಿ ಮುಖ್ಯಸ್ಥರು, ಮಾಜಿ ಕೇಂದ್ರ ಸಚಿವರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಶರದ್ ಪವಾರ್‌ ಅವರು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಲು ಇಂದು ನಿಪ್ಪಾಣಿಗೆ ಆಗಮಿಸಿದ್ದು, ಅವರಿಗೆ ನನ್ನ ವೈಯಕ್ತಿವಾಗಿ, ಕಾಂಗ್ರೆಸ್‌ ಪಕ್ಷದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆಂದರು.

ಪ್ರಸ್ತತ ಬೆಳವಣಿಗೆಗಳನ್ನು ನೋಡಿದರೆ ಎನ್‌ಡಿಎ ಒಕ್ಕೂಟ ದೇಶದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ. ಚಿಕ್ಕೋಡಿ ಇರಲಿ, ರಾಜ್ಯದಲ್ಲಿ ಇರಲಿ ಹೆಚ್ಚು ಸೀಟುಗಳು ಬರಬೇಕು. ಚಿಕ್ಕೋಡಿ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿಯೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಎನ್‌ಸಿಪಿ ಮುಖ್ಯಸ್ಥರು, ಹಿರಿಯರಾದ ಶರದ್ ಪವಾರ್‌ ಅವರು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲುವಿಗೆ ಹೆಚ್ಚಿನ ಮತಗಳನ್ನು ನೀಡಬೇಕೆಂದು ಎನ್‌ಸಿಪಿ ಕಾರ್ಯಕರ್ತರಲ್ಲಿ ಮನವಿ ಮಾಡಲು ಇಲ್ಲಿಗೆ ಬಂದಿದ್ದೇನೆ. ನೀವು ಹೆಚ್ಚಿನ ಮತಗಳನ್ನು ನೀಡುತ್ತೇರೆಂಬ ವಿಶ್ವಾಸವೂ ಇದೆ. ಕರ್ನಾಟಕದಲ್ಲಿ ತಮ್ಮ ಆಶೀರ್ವಾದದಿಂದ ಸಿಎಂ ಸಿದ್ದರಾಮಯ್ಯನವ ನೇತೃತ್ವದ ಬಡವರ, ರೈತರ ಪರವಾದ ಸರ್ಕಾರ ಕೆಲಸ ಮಾಡುತ್ತಿದ್ದು, ದೇಶದಲ್ಲಿಯೇ ಯಾವುದೇ ರಾಜ್ಯದಲ್ಲಿಯೂ ಜಾರಿಗೆ ತರದಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದೆ ಎಂದು ಹೇಳಿದರು.

ಡಾ. ಬಿ.ಆರ್.‌ ಅಂಬೇಡ್ಕರ್‌, ಜಗಜ್ಯೋತಿ ಬಸವಣ್ಣವರ ನಾಡಿನಲ್ಲಿ ಸರ್ವರನ್ನು ಸಮಾನತೆಯಿಂದ ಕಾಣುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಕೋಮುವಾದವನ್ನು ಸೃಷ್ಟಿಸುವ ಬಿಜೆಪಿಯನ್ನು ಮನೆಗೆ ಕಳಿಸಿಬೇಕೆಂದು ಕರೆ ನೀಡಿದರು.

 

ಎನ್‌ಸಿಪಿ ಮುಖಂಡ ಉತ್ತಮ ಪಾಟೀಲ್‌ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಬಿಟ್ಟರೇ ನಿಪ್ಪಾಣಿ ತಾಲೂಕು ಹೆಚ್ಚು ಆದಾಯಭರಿತ ಪಟ್ಟಣವಾಗಿದೆ. ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ, ಒಳ್ಳೆಯ ಆಸ್ಪತ್ರೆ ಇಲ್ಲ. ಮಿತಿ ಮೀರಿದ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ ನಾವೆಲ್ಲ ಒಗ್ಗಟ್ಟಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸೋಣ. ನಮ್ಮ ಪಕ್ಷದ ಹಿರಿಯ ನಾಯಕರಾದ ಶರದ್‌ ಪವಾರ ಅವರು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ. ಕಾರಣ ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಬಹುಮತದಿಂದ ಆಯ್ಕೆಮಾಡಿ ನಿಪ್ಪಾಣಿಯನ್ನು ಅಭಿವೃದ್ಧಿ ಪಡಿಸೋಣ ಎಂದರು.

ಎನ್‌ಸಿಪಿ ಮುಖ್ಯಸ್ಥರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಶರದ್ ಪವಾರ್‌ ಅವರ ಹೆಸರು ರಾಷ್ಟ್ರ ರಾಜ್ಯಕಾರಣದಲ್ಲಿ ಬಹಳಷ್ಟು ದೊಡ್ಡದಿದೆ. ಶರದ್ ಪವಾರ್‌ ಹೆಸರು ಹೇಳಿದರೆ ಸಾಕು ದೆಹಲಿಯಲ್ಲೂ ಕೆಲಸಗಳಾಗುತ್ತವೆ. ಇಂತಹ ನಾಯಕರು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ನಿಪ್ಪಾಣಿಗೆ ಬಂದಿದ್ದಾರೆ. ಅವರಿಗೆ ವೈಯಕ್ತಿವಾಗಿ ನಾನು, ನಮ್ಮ ಕ್ಷೇತ್ರದ ಎನ್‌ಸಿಪಿ ಕಾರ್ಯಕರ್ತರು ಹೂತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ತಿಳಿಸಿದರು.

ಗುಜರಾತ್ ರಾಜ್ಯದ ದಲಿತ ನಾಯಕ, ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿ, ಬಿಜೆಪಿಯವರಂತೆ ಸುಳ್ಳು ಹೇಳುವವರು ನಾವಲ್ಲ. ನಾವು ನುಡಿದಂತೆ ನಡೆದಿದ್ದೇವೆ ಎನ್ನುವುದಕ್ಕೆ ಕರ್ನಾಟಕದಲ್ಲಿ ಜಾರಿಯಾದ ಐದು ಗ್ಯಾರಂಟಿಗಳೇ ಸಾಕ್ಷಿಯಾಗಿದ್ದು, ಸರ್ವರ ಪ್ರಗತಿಗೆ ಶ್ರಮಿಸುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ಕೋಮುವಾದಿ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೀಡಾಗಿದೆ. ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದಕ್ಕೆ ಧಕ್ಕೆ ತರಲಾಗಿದೆ. ದೇಶದ ಸಂವಿಧಾನ ಉಳಿಸಿ ಪ್ರಜಾಪ್ರಭತ್ವ ರಕ್ಷಿಸಲು ಮತ್ತು ಸರ್ವಾಧಿಕಾರ ತೊಲಗಿಸಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಸಮ ಸಮಾಜ ನಿರ್ಮಿಸಬೇಕೆಂದು ಹೋರಾಡಿದ, ವಿಶ್ವ ಗುರು ಬಸವಣ್ಣ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

 

ಇನ್ನು ಎನ್‌ಸಿಪಿ ಮುಖ್ಯಸ್ಥರು, ಮಾಜಿ ಕೇಂದ್ರ ಸಚಿವರು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಶರದ್ ಪವಾರ್‌ ಅವರು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಬೃಹತ್ ಸಮಾವೇಶಕ್ಕೆ ಆಗಮಿಸಿದಂತೆ ಎನ್‌ಸಿಪಿ ಕಾರ್ಯಕರ್ತರು ಜಯ ಘೋಷ ಕೂಗಿ ಸಂತಸ ಪಟ್ಟರು.

ಈ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ದರ್ಜೆಯ ಸಚಿವರಾದ ಡಿ. ಸುಧಾಕರ್‌, ಶಾಸಕ ಎಚ್.ಟಿ. ತಿಪ್ಪಯ್ಯ, ಯುವ ನಾಯಕ ರಾಹುಲ್‌ ಜಾರಕಿಹೊಳಿ, ಮಾಜಿ ಶಾಸಕ ಸುಭಾಷ ಜೋಶಿ, ಖ್ಯಾತ ಉದ್ಯಮಿ ಅಭಿನಂದನ ಪಾಟೀಲ್, ದಲಿತ ಮುಖಂಡ ಅಶೋಕ ಅಸೂದೆ, ರವಿ ಸಿಂದೆ, ತಾತ್ಯಾ ಸಾಹೇಬ್ ನಾಯ್ಕ, ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಹಲವು ನಾಯಕರು, ನಿಪ್ಪಾಣಿ ಮತಕ್ಷೇತ್ರದ ಪಟ್ಟಣ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಪಂ ಸದಸ್ಯರು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ