ಬೆಂಗಳೂರು: ವಿಚಾರ ಕ್ರಾಂತಿ ಮೂಲಕ ವೇಗವಾಗಿ ವೈಚಾರಿಕ ಕಾಂತ್ರಿ ಬೆಳೆಸುವ ಕಾರ್ಯವಾಗಲಿ, ನಿಮ್ಮ ಜತೆ ಹಿಂದೆಯೂ ಇದ್ದೆ, ಇಂದು ಇರುತ್ತೇನೆ, ಮುಂದೆಯೂ ಸಾಗುತ್ತೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ನೇಗಿಲಯೋಗಿ ಟ್ರಸ್ಟ್, ಅಖಿಲ ಕರ್ನಾಟಕ ವಿಚಾರವಾದಿಗಳ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ “ವಿಚಾರ ಕ್ರಾಂತಿ” ಒಂದು ದಿನದ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸುಧಾರಕಿ, ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಸೇರಿದಂತೆ ಮಹಾತ್ಮರ ಚರಿತ್ರೆ ಯುವಕರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಹೊರಹೊಮ್ಮಿದ್ದು, ಪ್ರತಿ ತಾಲೂಕು ಘಟಕಗಳಲ್ಲಿಯೂ ಯಾವುದೇ ರೀತಿಯ ಪ್ರಚಾರ ಬಯಸದೇ ಕಾರ್ಯ ನಿರ್ವಹಿಸುತ್ತಿದ್ದು, ಜಾತ್ಯಾತೀತವಾಗಿ ಸಂಘಟನೆಯನ್ನು ಕಟ್ಟುತ್ತಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಮಾನವ ಬಂಧುತ್ವ ವೇದಿಕೆ ಮೂಲಕ ಮೂಢ ನಂಬಿಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಯುವಕರನ್ನು ಜಾಗೃತಿಗೊಳಿಸುತ್ತಿದ್ದೇವೆ. ನಮ್ಮ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ದೇವರಲ್ಲಿನ ನಂಬಿಕೆ ಮೂಢನಂಬಿಕೆ ಅಲ್ಲ. ಆದರೆ, ದೇವರ ಹೆಸರಿನಲ್ಲಿ ಬಲಿ ಕೊಡುವುದು, ವಾಮಾಚಾರ, ಮಾಟ ಮಂತ್ರ ನಡೆಸುವುದು ಅಮಾನವೀಯ ಆಚರಣೆಯಾಗಿದೆ. ಇದನ್ನು ತಡೆಯಬೇಕು ಎಂದರು.
ಯುವಕರು ಸರಿಯಾದ ದಾರಿಯಲ್ಲಿ ಸಾಗಬೇಕೆಂದರೆ, ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ತರಬೇತಿ ಕೊಡಬೇಕು. ಬೆಳಗಾವಿ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಯುವಕರಿಗೆ ಆರ್ಮಿ, ಪೊಲೀಸ್, ಕೆಎಎಸ್, ಐಎಎಸ್, ಪಿಎಸೈ ಸೇರಿ ಕೌಶಲ್ಯಾಧಾರಿತ ತರಬೇತಿ ನೀಡುತ್ತಿದ್ದು, ಹಲವು ವಿದ್ಯಾರ್ಥಿಗಳಿಗೆ ತಮ್ಮ ಜೀವನ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುತ್ತಿದ್ದೇವೆಂದು ತಿಳಿಸಿದರು.
ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ವಿಚಾರವಾದಿಗಳಾದ ಪ್ರೊ. ನರೇಂದ್ರ ನಾಯಕ್, ಪ್ರಬಂಧ ಮಂಡನೆಕಾರ ಆರಡಿ ಮಲ್ಲಯ್ಯ ಕಟ್ಟೇರ, ಡಾ. ಪ್ರದೀಪ್ ಮಾಲ್ಗುಡಿ, ಡಾ. ಸವಿತಾ ಶಿವರಾಯ ಶೇಟೆ, ವಕೀಲರಾದ ಅನಂತ್ ನಾಯಕ್, ಆಯೋಜಕರಾದ ಡಾ. ಸ್ವಾಮಿ, ಎಚ್.ಆರ್., ಶ್ರೀನಿವಾಸ್ ನಟೇಕರ್, ನಾಗೇಶ್ ಅರಳಕುಪ್ಪೆ ಸೇರಿದಂತೆ ಅನೇಕರು ಇದ್ದರು.