ರಾಮದುರ್ಗ : ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಜಯಂತಿಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭಾಗವಹಿಸಿದ್ದರು.
ಪಟ್ಟಣದ ಸಾಯಿ ನಗರದ ಪುರಸಭೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾಲಕಾಲಕ್ಕೆ ವಿವಿಧ ಸಂತರು, ದಾರ್ಶನಿಕರು, ಸಮಾಜ ಸುಧಾರಕರು ಈ ನೆಲದಲ್ಲಿ ಜನಿಸಿ, ಜೀವನಮಾರ್ಗ ಬೋಧಿಸಿ ದ್ದಾರೆ. ಅದೇ ರೀತಿಯಲ್ಲಿ, ಹಿಂದುಳಿದಿದ್ದ ಬಂಜಾರ ಸಮುದಾಯ ವನ್ನು ಜ್ಞಾನದ ಬೆಳಕಿನೆಡೆಗೆ ತಂದವರು ಸಂತ ಸೇವಾಲಾಲರು, ಬುದ್ಧ, ಬಸವ, ಕಬೀರ, ಗುರುನಾನಕರಂತೆ ಸೇವಾಲಾಲರು ಸತ್ಯ, ಅಹಿಂಸೆ, ಪ್ರಾಮಾಣಿಕತೆಯ ಜೀವನಮೌಲ್ಯಗಳನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ಸಮಾಜಕ್ಕೆ ನಿರಂತರವಾಗಿ ಬೋಧನೆ ಮಾಡಿದ ಸಂತ ಸೇವಾಲಾಲರು ಯುವ ಜನತೆಗೆ ಅದರ್ಶವಾಗಿದ್ದಾರೆ ಎಂದರು.
ಯುವಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು, ಸಮಾಜದಲ್ಲಿ ಸಾಧನೆಯ ಹಾದಿಯಲ್ಲಿ ಸಾಗಬೇಕಾದರೆ ಶಿಕ್ಷಣ ಅವಶ್ಯಕವಾಗಿರುತ್ತದೆ, ಶಿಕ್ಷಣ ಪಡೆದು ಸಾಧನೆ ಮಾಡಿ ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.
ನಂತರ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸತ್ಕಾರ ಮಾಡಿದರು.
ಈ ಸಂದರ್ಭದಲ್ಲಿ ಸಮಾಜದ ಪೂಜ್ಯರು, ಮುಖಂಡರು, ಯುವಕರು, ಸಾವಿರಾರು ಜನರು ಉಪಸ್ಥಿತರಿದ್ದರು