ನಿಪ್ಪಾಣಿ: ಸ್ಮಶಾನ ಭೂಮಿಯೂ ಪವಿತ್ರ ಎಂದು ಸಾರಿ ಹೇಳಿರುವ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ ಜಾರಕಿಹೊಳಿ ಅವರು ಇಂದು ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸ್ಮಶಾನ ಭೂಮಿಯಲ್ಲಿಯೇ ಮಗುವಿಗೆ ನಾಮಕರಣ ಮಾಡುವ ಮೂಲಕ ಪರಿವರ್ತನಾ ದಿನಕ್ಕೆ ಮೆರಗು ನೀಡಿದರು.
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಸಾಕ್ಷಿಯಾಯಿತು. ಬಾಳು ಬರಗಾಲೆ ಅವರ ಮೊಮ್ಮಗನಿಗೆ ಸ್ಮಶಾನದಲ್ಲಿ ತೊಟ್ಟಿಲು ತೂಗಿ, ‘ಭೀಮರಾವ್’ ಎಂದು ನಾಮಕರಣ ಮಾಡಲಾಯಿತು. ಕೃಷ್ಣಾ ನದಿ ತೀರದಿಂದ ಮತ್ತೊಬ್ಬ ಭೀಮರಾವ್ ಹೋರಾಟ ಮಾಡಲಿ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಂತೆ ಬೆಳೆಯಲಿ, ದೇಶದ ಕೊಳೆ ತೊಳೆಯಲಿ ಎಂದು ಸತೀಶ ಜಾರಕಿಹೊಳಿ ಅವರು ಶುಭ ಹಾರೈಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಇದೊಂದು ವಿನೂತನ ಹಾಗೂ ಐತಿಹಾಸಿಕ ಕಾರ್ಯಕ್ರಮ. ನಂಬಿಕೆ ಬೇರೆ, ಮೂಢ ನಂಬಿಕೆ ಬೇರೆ, ನಂಬಿಕೆಗಳನ್ನೇ ಕೆಲವರು ವ್ಯಾಪಾರಕ್ಕಾಗಿ ಮೂಢನಂಬಿಕೆಯನ್ನಾಗಿ ಪರಿವರ್ತಿಸಿದ್ದಾರೆ. ಬಿಸಿಲಲ್ಲಿ ದುಡಿಯದೇ ಹೆದರಿಸಿ ಕೆಲವರು ದುಡ್ಡು ಮಾಡುತ್ತಿದ್ದಾರೆ. ಬುದ್ದ, ಬಸವಣ್ಣ , ಡಾ. ಅಂಬೇಡ್ಕರ್ ಅವರ ಕಾಲದಿಂದಲೂ ಇಂಥವರ ವಿರುದ್ದ ಹೋರಾಟ ನಡೆಯುತ್ತಲೇ ಬಂದಿದೆ ಎಂದು ಟೀಕಿಸಿದರು.
ಬುದ್ದ, ಬಸವ, ಅಂಬೇಡ್ಕರ್, ಶಾಹು ಮಹಾರಾಜ್, ಪರಿಯಾರ್, ನಾರಾಯಣ ಗುರು, ಫುಲೆ ದಂಪತಿಗಳ ತತ್ವ ಆದರ್ಶಗಳು ನಮಗೆ ಮಾದರಿಯಾಗಲಿ. ದೇವಸ್ಥಾನ, ಸ್ಮಶಾನ ಎಲ್ಲವೂ ಪವಿತ್ರ ಸ್ಥಳಗಳೇ, ಆದ್ರೆ ಕೆಲವೇ ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿ ಜನರ ಹೆದರಿಸುತ್ತಿದ್ದಾರೆ. ಪ್ರತಿಯೊಬ್ಬರು ಸತ್ತ ನಂತರ ಹೋಗುವುದು ಸ್ಮಶಾನಕ್ಕೆ ಹೀಗಾಗಿ ಸ್ಮಶಾನ ಕೆಟ್ಟ ಸ್ಥಳ ಎಂಬುವದನ್ನು ನಾವು ಬಿಡಬೇಕು. ಹಂತ ಹಂತವಾಗಿ ಪರಿವರ್ತನೆಯಾಗಬೇಕು ಎಂದರು.
ಮಾಜಿ ಸಚಿವ ವೀರಕುಮಾರ ಪಾಟೀಲ ,ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಜಿಪಂ ಉಪಾಧ್ಯಕ್ಷ ಅರುಣ್ ಕಟಾಂಬಳೆ ಸೇರಿದಂತೆ ಮುಂತಾದವರು ಇದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮೌಢನಂಬಿಕೆ, ಕಂದಾಚಾರ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ಎಂಬ ಸಂಘಟನೆ ಹುಟ್ಟು ಹಾಕಿದ್ದು, ರವೀಂದ್ರ ನಾಯ್ಕರ್ ಅವರ ನೇತೃತ್ವದಲ್ಲಿ ಈ ಸಂಘಟನೆ ರಾಜ್ಯಾದ್ಯಂತ ಸಕ್ರಿಯವಾಗಿದೆ.
ಮೌಢ್ಯ ವಿರೋಧಿ ಹಲವು ಕಾರ್ಯಕ್ರಮಗಳ ಮಾಡುವ ಮೂಲಕ ದೇಶ್ಯಾದ್ಯಂತ ಹೆಸರುವಾಗಿಯಾಗಿದೆ. ಡಿ. 6 ರಂದು ಬೆಳಗಾವಿಯ ಸದಾಶಿವ ನಗರ ರುದ್ರಭೂಮಿಯಲ್ಲಿ ನಡೆಯುವ ಮೌಢ್ಯ ವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮ ಪ್ರಮುಖ.
ಇತ್ತೀಚಿಗಷ್ಟೇ ಸತೀಶ ಜಾರಕಿಹೊಳಿ ಅವರು ತಾವು ಓಡಾಡುವ ನೂತನ ಕಾರಿಗೂ ಸ್ಮಶಾನದಿಂದಲೇ ಚಾಲನೆ ನೀಡಿದನ್ನು ಇಲ್ಲಿ ನಾವು ಸ್ಮರಿಸಬಹುದು.
ಇನ್ನು ಈ ಕಾರ್ಯಕ್ರಮಕ್ಕೆ ಸತೀಶ ಜಾರಕಿಹೊಳಿ ಅವರು ತಮ್ಮ ಹೆಲಿಕಾಪ್ಟರ್ ನಲ್ಲಿ ತೆರಳಿದ್ದು, ಸುತ್ತಮುತ್ತಲಿನ ಸಾವಿರಾರು ಜನರು ನೆರೆದಿದ್ದರು..