ಬೆಳಗಾವಿ: ಮೂಢನಂಬಿಕೆ, ಕಂದಾಚಾರ ಹೊಗಲಾಡಿಸಲು ನಿರಂತರ ಶ್ರಮಿಸುತ್ತಿರುವ ಶಾಸಕ ಸತೀಶ ಜಾರಕಿಹೊಳಿ ಅವರು ಸಂಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆ ಸಂಘಟನೆ ಸದಾ ಒದಾ ಒಂದಿಲ್ಲದೊಂದು ವಿನೂತನ ಕಾರ್ಯಕ್ರಮದ ಮೂಲಕ ರಾಜ್ಯದ ಜನರ ಗಮನ ಸೆಳೆಯುತ್ತಿರುತ್ತದೆ. ಈ ಸಂಘಟನೆ ಕಾರ್ಯಕರ್ತರೊಬ್ಬರು ತಮ್ಮ ಮೊಮ್ಮಗನ ನಾಮಕರಣ ಕಾರ್ಯಕ್ರಮ ಸ್ಮಶಾನದಲ್ಲಿ ಆಯೋಜನೆ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ನಿಪ್ಪಾಣಿ ತಾಲೂಕಿನ ಹುನ್ನರಗಿ ರುದ್ರಭೂಮಿಯಲ್ಲಿ ಜ. 17(ನಾಳೆ) ಬೆಳಗ್ಗೆ 10.30 ಕ್ಕೆ ಈ ಕಾರ್ಯಕ್ರಮದಲ್ಲಿ ನಡೆಯಲಿದ್ದು, ಶಾಸಕ ಸತೀಶ ಜಾರಕಿಹೊಳಿ ಅವರು ಮಗುವಿಗೆ ನಾಮಕರಣ ಮಾಡಲಿದ್ದಾರೆ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕರಾದ ಸುಭಾಷ ಜೋಷಿ, ಕಾಕಸಾಹೇಬ್ ಪಾಟೀಲ್, ಮಾಹಾವೀರ ಮೋಹಿತೆ, ವೀರಕುಮಾರ್ ಪಾಟೀಲ್ ಮುಂತಾವರು ಭಾಗಿಯಾಗಲಿದ್ದಾರೆ.
ಈ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗ್ರಾಮದ ರುದ್ರಭೂಮಿ ಸಮೀಪ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಸತೀಶ ಜಾರಕಿಹೊಳಿ ಅವರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ತೆರಳಲಿದ್ದಾರೆ.
ಮಾನವ ಬಂಧುತ್ವ ವೇದಿಕೆ ಸಂಘಟನೆ ಕಳೆದ ಹಲವ ವರ್ಷಗಳಿಂದ ವಿನೂತನ ಕಾರ್ಯಕ್ರಮಗಳ ಮೂಲಕ ಮೌಢ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ. ಸ್ಮಶಾನ ಎಂದರೆ ಪ್ರತಿಯೊಬ್ಬರು ಹೆದರುತ್ತಾರೆ. ಆದ್ರೆ ಸ್ಮಶಾನವೂ ಪವಿತ್ರ ಭೂಮಿ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದನ್ನು, ಜತೆಗೆ ತಮ್ಮ ನೂತನ ಕಾರಿಗೂ ಇಲ್ಲಿಂದಲೇ ಚಾಲನೆ ನೀಡಿದನ್ನು ಇಲ್ಲಿ ನೆನೆಯ ಬಹುದು.
ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ಮಾನವ ಬಂಧುತ್ವ ವೇದಿಕೆ ಸಂಘಟನೆ ಜನರಲ್ಲಿ ಆಳವಾಗಿ ಬೇರೂರಿರುವ ಮೌಢ್ಯವನ್ನು ಬುಡ ಸಮೇತ ಕಿತ್ತು ಹಾಕಲು ನಿರಂತರ ಶ್ರಮಿಸುತ್ತಿದೆ.