ಬೆಳಗಾವಿ: ಮಹಾನ್ ಪುರುಷರ ಇತಿಹಾಸ ತಿರುಚುವ ಪ್ರಯತ್ನ ಆಗುತ್ತಿದೆ. ಇತಿಹಾಸ ಉಳಿಸಿ, ಬೆಳೆಸುವ ಸಲುವಾಗಿ ಮಹಾನ್ ಪುರುಷರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.
ಇಲ್ಲಿನ ಆಂಜನೇಯ ನಗರದಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು,
ಮಹಾಪುರುಷರು ಇದ್ದ, ಹಾಗೆ ಇರಬೇಕು. ಯಾರೋ ಮಧ್ಯ ಬಂದು ಒಂದು ಪುಸ್ತಕದಲ್ಲಿ ತಿರುಚಿದರೆ ಹತ್ತು ವರ್ಷದ ನಂತರ ಅದು ನಿಜವಾಗುತ್ತದೆ. ಹೀಗಾಗಿ ರಾಯಣ್ಣ, ಅಂಬೇಡ್ಕರ್ ಅವರೆಲ್ಲಾ ಇದ್ದ ಹಾಗೇ ಇರಬೇಕೆಂಬ ಉದ್ದೇಶದಿಂದ ಅಲ್ಲಲ್ಲಿ ಮಹಾನ್ ಪುರುಷರ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಸರ್ಕಾರದಿಂದ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ದೇಶದ ಪ್ರಗತಿಗೆ ಕಾಂಗ್ರೆಸ್ ಸಾಕಷ್ಟು ಶ್ರಮಿಸಿದೆ: 2013ರಲ್ಲಿ ನಾನು ಮಂತ್ರಿಯಾಗಿದ್ದಾಗ ಈ ಕಾಲೇಜು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದೇವು, ಈಗ ಇಷ್ಟು ದೊಡ್ಡದಾಗಿ ಬೆಳೆದಿರುವುದು ಬಹಳ ಸಂತೋಷ ತಂದಿದೆ. ಇದು ಇತಿಹಾಸ, ಮತ್ತೆ ಯಾರೋ, ಬಂದು ನಾವು ಮಾಡಿದ್ದೇವೆ ಹೇಳುತ್ತಿದ್ದಾರೆ, ಆದರೆ, ಇತಿಹಾಸ ಯಾರೂ ಮರೆಯಬಾರದು. ನಾವು ಮಾಡಿದ್ದು ನಾವಾಗಿಯೇ ಉಳಿಯುವಂತೆ ಆಗಬೇಕು ಎಂದು ಹೇಳಿದರು.
ದೇಶದ ಪ್ರಗತಿಗೆ ಕಾಂಗ್ರೆಸ್ ಸಾಕಷ್ಟು ಶ್ರಮಿಸಿದೆ. ದೇಶದಲ್ಲಿ ಹಿಂದೆ ಏನೂ ಇರಲಿಲ್ಲ ಎಂದು ಹೇಳುತ್ತಿರುವುದು ಈಗಿನ ಚರ್ಚೆಯ ವಿಷಯವಾಗಿದೆ. ಕಟ್ಟಿದವರು ಬೇರೆ, ಪಾಪ ಅವರೆಲ್ಲ ದೂರವೇ ಉಳಿದರು. ಆದರೆ ಕಟ್ಟದೇ ಇದ್ದವರು ಈಗ ವಿಶ್ವಗುರುವಾಗಿ ಹೊರ ಹೊಮ್ಮಿದ್ದಾರೆ, ಇದು ದೇಶ ಮತ್ತು ರಾಜ್ಯದ ಅತ್ಯಂತ ದುರ್ದೈವ ಹಾಗಾಗಿ, ದೇಶದ ಇತಿಹಾಸವನ್ನ ಈ ಭೂಮಿ ಇರೋವರೆಗೂ ನಿರಂತರವಾಗಿ ನೆನೆಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಣ್ಣ ಅವರ ಹೆಸರಿನಲ್ಲಿ ಸಾಕಷ್ಟು ಪುಸ್ತಕ, ನಾಟಕ, ಸಿನಿಮಾಗಳಿವೆ. ಅವರ ಹೋರಾಟ, ಜೀವನ ಚರಿತ್ರೆಯನ್ನು ಬೇರೆ ಬೇರೆ ವಿಧಾನದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿದಿವಸ ಇನ್ಮುಂದೆ ನಿಮ್ಮ ಕಣ್ಮುಂದೆ ಅವರು ಇರುತ್ತಾರೆ. ಅವರ ಹೋರಾಟದ ದಾರಿಯನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸತೀಶ ಜಾರಕಿಹೊಳಿಗೆ ಕಿವಿಮಾತು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ ಮಾತನಾಡಿ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿಲ್ಲ. ಈಗಾಗಲೇ ನಮ್ಮ ಪಕ್ಷ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈಗಾಗಲೇ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ಚರಿತ್ರೆ ಕೇಳಿದ್ರೆ ಮನಸ್ಸು ರೋಮಾಂಚನಗೊಳ್ಳುತ್ತದೆ. ಚನ್ನಮ್ಮನ ಜೊತೆಗೆ ನಿಂತು ಹೋರಾಡಿದ ಮಹಾಪುರುಷ ಸಂಗೊಳ್ಳಿ ರಾಯಣ್ಣ. ಸಂಗೊಳ್ಳಿ ರಾಯಣ್ಣನ ಸಾಹಸ, ಬಲಿದಾನ ಎಲ್ಲವೂ ಪ್ರೇರಣಾದಾಯಕ. ದೇಶದಲ್ಲಿಂದು ಚರಿತ್ರೆಯನ್ನು ತಿರುಚುವ ಕೆಲಸ ನಡಿತಿದೆ. ಆದರೆ ಇಂಥ ಮಹಾನಯಕರ ಚರಿತ್ರೆ ಯಾರಿಂದಲೂ ತಿರುಚಲು ಆಗುವುದಿಲ್ಲ ಎಂದರು.
15 ಸಾವಿರ ಅತಿಥಿ ಶಿಕ್ಷಕರು ನಮ್ಮ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಹಿಂದಿನ ಸರ್ಕಾರ ಸಹಾಯಕ ಉಪನ್ಯಾಸಕರ ಉದ್ದೆಗಳ ನೇಮಕಾತಿಯ ಗೊಂದಲ ಇತ್ತು. ಈಗ ನಮ್ಮ ಸರ್ಕಾರ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳ ಭರ್ತಿ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ರಾಜು( ಆಸೀಫ್ ) ಸೇಠ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎಂಎಲ್ಸಿ ನಾಗರಾಜ ಯಾದವ,ಆರ್ ಸಿಯು ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ, ಕುಲಸಚಿವರಾದ ರಾಜಶ್ರೀ ಜೈನಾಪುರೆ, ಪ್ರೊ. ಶಿವಾನಂದ ಗೊರನಾಳೆ, ರವಿ , ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ. ರವಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ವಿಶೇಷ ಅಧಿಕಾರಿ ಡಾ. ಎಂ. ಜಯಪ್ಪ, ಪ್ರೊ.ಎಸ್. ಬಿ. ಆಕಾಶ , ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ, ಸೇರಿ ಮತ್ತಿತರರು ಇದ್ದರು