ಅವೈಜ್ಞಾನಿಕ ಕಾಮಗಾರಿ ಮಾಡಿದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು.
ಗೋಕಾಕ-ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು, ಗುತ್ತಿಗೆದಾರರಿಗೆ ಸಚಿವರ ಎಚ್ಚರಿಕೆ
ಗೋಕಾಕ: ನಗರದ ನಾಕಾ ನಂ. 1 ರಿಂದ ಡಿವೈಎಸ್ಪಿ ಕಚೇರಿವರೆಗೆ ನಿರ್ಮಿಸಿರುವ ಚರಂಡಿ ರಸ್ತೆಯಿಂದ 2 ಅಡಿ ಎತ್ತರವಾಗಿ ನಿರ್ಮಿಸಿದ್ದು, ಮಳೆ ನೀರು ಹೋಗಲು ತೊಂದರೆಯಾದರೆ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬುಧವಾರ ನಗರದ ತಾಪಂ ಸಭಾಂಗಣದಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರ ಮೇಲಿದ್ದು ,ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಆದರೆ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ, ಜನರಿಗೆ ಅನುಕೂಲವಾಗುವಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೊಂಡು ಅವಧಿ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು.
ಲೋಕೋಪಯೋಗಿ ಇಲಾಖೆಯಲ್ಲಿ ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರ ಪಟ್ಟಿ ಮಾಡಿ ಅಂತಹವರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡದೆ ಗುಣಮಟ್ಟದ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆಯನ್ನು ನೀಡಿ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗುವಂತೆ ಕ್ರಮ ಕೈಗೊಳ್ಳಬೇಕು. ಒಮ್ಮೆ ರಸ್ತೆ ಮಾಡಿದರೆ ಕನಿಷ್ಠ 10 ವರ್ಷಗಳ ವರೆಗೆ ಬಾಳಿಕೆ ಬರುವಂತೆ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುತುವರ್ಜಿ ವಹಿಸಬೇಕು. ಲೋಳಸೂರ ಸೇತುವೆ , ವಸತಿ ನಿಲಯಗಳು, ನ್ಯಾಯಾಲಯ ಕಟ್ಟಡಕ್ಕೆ ಹೆಚ್ಚಿನ ಮಹತ್ವ ನೀಡಿ ಕಾರ್ಯಮಾಡುವುದರ ಜೊತೆಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ವಗೊಳಿಸಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬೇಗ ಪೂರ್ಣಗೊಳಿಸಬೇಕು ಎಂದರು.
ನಗರದ ನಾಕಾ ನಂ. 1 ರ ರಸ್ತೆಯನ್ನು ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿಯ ವರೆಗೆ ಸಂಚಾರಕ್ಕೆ ತೊಂದರೆಯಾಗದಂತೆ ದುರುಸ್ಥಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಅಧೀನದಲ್ಲಿ ನಿರ್ಮಾಣವಾಗಿರುವ ವಾಣಿಜ್ಯ ಸಂರ್ಕೀಣಗಳನ್ನು ಜನರಿಗೆ ಉಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು. ಇಲಾಖೆಯಿಂದ ಸಾಕಷ್ಟು ಬಂಡವಾಳ ಹಾಕಿ ವಾಣಿಜ್ಯ ಸಂರ್ಕೀಣಗಳನ್ನು ಕಟ್ಟಿದ್ದು, ಜನರಿಗೆ ಅನುಕೂಲವಾಗುವಂತೆ ಬಾಡಿಗೆ ಕೊಡದೆ ಬಾಕಿ ಉಳಿದಿರುವ ಸಂರ್ಕೀಣಗಳನ್ನು ಅತಿ ಶೀಘ್ರದಲ್ಲೇ ವ್ಯಾಪಾರಿಗಳಿಗೆ ಬಾಡಿಗೆ ನಡಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಟಿಸುವ ಮುಖ್ಯ ರಸ್ತೆಗಳನ್ನು ನಿರ್ಮಿಸಬೇಕು ಎಂದರು.
ನಗರದಲ್ಲಿ ನೀರು ಸರಬರಾಜು ಮಾಡುವಲ್ಲಿ ಸೂಕ್ತ ಕ್ರಮ ಕೈಗೊಂಡು, ಮೀಟರಗಳು ಗಾಳಿಯಿಂದ ತಿರುಗುತ್ತಿದ್ದು ಜನರಿಗೆ ಹೆಚ್ಚಿನ ಶುಲ್ಕ ಬರುತ್ತಿದ್ದು, ಮೀಟರಗಳನ್ನು ಸರಿಪಡಿಸಬೇಕು. ಮುಂದೆ ಗೋಕಾಕ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಯೋಗಿಕೋಳ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಡ್ಯಾಂನ ಪಕ್ಕದಲ್ಲಿ ಪಿಲ್ಟರ ಹೌಸ ನಿರ್ಮಿಸಲು ಅರಣ್ಯ ಇಲಾಖೆಯ ಜಾಗೆ ಗುರುತಿಸಿ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಇರುವ ಹಳ್ಳಗಳನ್ನು ಗುರುತಿಸಿ ಸ್ವಚ್ಛ ಮಾಡಬೇಕು. ಪ್ರವಾಹಕ್ಕೆ ಬಿದ್ಧ ಮನೆಗಳನ್ನು ಮಾಲೀಕರು ಬೇರೆ, ಜಿಪಿಎಸ್ ಆಗಿದ್ದ ಬೇರೆ ಎಂದು ಕೆಲವು ದೂರುಗಳು ಬಂದಿದ್ದು ಅವುಗಳನ್ನು ಶೀಘ್ರದಲ್ಲೇ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ನಗರಸಭೆ ಅಧಿಕಾರಿ ಗಣಾಚಾರಿ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡ ಸಚಿವರು ಮನೆಗಳ ಜೆ.ಪಿ.ಎಸ್. ಮಾಡವಲ್ಲಿ ಎಡವಟ್ಟು ಮಾಡಿದ್ದನ್ನು ಸರಿಪಡಿಸಿ ಸರಕಾರದಿಂದ ಬೇಗನೆ ಮನೆ ಕಟ್ಟಲು ಹಣ ಬರುವಂತೆ ಸಚಿವರು ಗಣಾಚಾರಿಗೆ ತೀವ್ರ ತರಾಟೆಗೆ ತಗೆದುಕೊಂಡರು.
ನಗರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಸಲುವಾಗಿ ಜನದಟ್ಟನೆ ನಿಯಂತ್ರಿಸಲು ನಗರದ ಹೊರಬಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಿ , ಇಗಿರುವ ಬಸ ನಿಲ್ದಾಣವನ್ನು ಸಿಟಿ ಬಸ್ ನಿಲ್ದಾಣ ಮಾಡಬೇಕು, ಅಲ್ಲಿಯವರೆಗೆ ತಾತ್ಕಾಲಿಕ ಜಾಗವನ್ನು ಗುರುತಿಸಿ ಎಕ್ಸಪ್ರೆಸ್ ವಾಹನಗಳು ನಗರದಲ್ಲಿ ಬಾರದಂತೆ ನೋಡಿಕೊಳ್ಳಿ ಎಂದು ಕೆಎಸ್ ಆರ್ ಟಿ.ಸಿ ಅಧಿಕಾರಿಗಳಿಗೆ ಸೂಚಿಸಿದರು.
ನಗರೋತ್ಥಾನ ಅಡಿಯಲ್ಲಿ ಕಾಮಗಾರಿ ಮತ್ತು ನೀರು ಸರಬರಾಜು ಮಾಡಬೇಕು. ಮಾಸ್ಟರ್ ಪ್ಲ್ಯಾನ್ ಬಣಗಾರಗಲ್ಲಿ , ಕಿಲ್ಲಾಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 15 ಹಣಕಾಸು ಯೋಜನೆಯಲ್ಲಿ ಪ್ರಸ್ತುತ 5 ಕಾಮಗಾರಿಗಳು ಪ್ರಗತಿಯಲ್ಲಿದ್ದು ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಗೋಕಾಕ ತಹಶೀಲ್ದಾರ್ ಕೆ.ಮಂಜುನಾಥ್ , ಮೂಡಲಗಿ ತಹಶೀಲ್ದಾರ್ , ಪ್ರಶಾಂತ್ ಚನ್ನಗೊಂಡ, ಗೋಕಾಕ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ , ಮೂಡಲಗಿ ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚನ್ನನವರ ಉಪಸ್ಥಿತರಿದ್ದರು.