ಯಮಕನಮರಡಿ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಸರಕಾರ ರಚಿಸಲಿದೆ. ಮತದಾರರು ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಿಜೆಪಿಯ ಭ್ರಷ್ಟ ಆಡಳಿತಕ್ಕೆ ಜನ ತಕ್ಕ ಪಾಠ ಕಲಿಸಲು ಮುಂದಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ಇಸ್ಲಾಂಪು̧ರ ಚಿಕ್ಕಲದಿನ್ನಿ, ಹೊಸಗಡ, ಶಹಬಂದರ್, ರಾಜಾಕಟ್ಟಿ, ಯಲ್ಲಾಪುರ ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿ ನಂತರ ಮಾತನಾಡಿದ ಅವರು, ಜನರು ಬೆಲೆ ಏರಿಕೆ, ಭ್ರಷ್ಟಾಚಾರ, ಕೊರೋನಾ, ಪ್ರವಾಹದಿಂದ ರೋಸಿ ಹೋಗಿದ್ದಾರೆ. ಬೆಳಗಾವಿ ಸಂತೋಷ ಪಾಟೀಲ ಎನ್ನುವ ಯುವಕ ಭ್ರಷ್ಟಾಚಾರಕ್ಕ ನಲುಗಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಎಲ್ಲವೂ ಕ್ಷೇತ್ರದ ಜನರಿಗೆ ಗೊತ್ತಿದೆ. ಹಾಗಾಗಿ ಜನರು ಭ್ರಷ್ಟ ಬಿಜೆಪಿ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕೈ ಪಕ್ಷಕ್ಕೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಜನರ ಬದುಕು ಕಟ್ಟುವ ಪಕ್ಷ: ಕಾಂಗ್ರೆಸ್ ಪಕ್ಷ ಜನರ ಬದುಕು ಕಟ್ಟುವ ಪಕ್ಷ. ಬಿಜೆಪಿ ಜನರ ಭಾವನೆಯ ಮೇಲೆ ಆಟವಾಡುವ ಪಕ್ಷ. ಎಲ್ಲರೂ ಪಕ್ಷ ಜಾತಿ ಭೇದ ಮರೆತು ಮತ ನೀಡಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಜನರ ಬದುಕಿಗೆ ನೀಡಿರುವ ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಮತ ಕೇಳಲು ಹೆಮ್ಮೆ ಎನಿಸುತ್ತದೆ ಎಂದ ಅವರು, ಜನರ ಎದುರು ಕಣ್ಣೀರು ಸುರಿಸುತ್ತಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ದ್ವೇಷ ರಾಜಕಾರಣದ ಮೂಲಕ ಜನರ ಹಿತಾಸಕ್ತಿಗಳನ್ನು ಬಲಿ ನೀಡುತ್ತಿರುವ ಬಿಜೆಪಿ ಪಕ್ಷವನ್ನು ಈ ಬಾರಿ ಸೋಲಿಸಿ, ಜನಪರ ಆಡಳಿತ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಯಮಕನಮರಡಿ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿ: ಯಮಕನಮರಡಿ ಕ್ಷೇತ್ರದಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಶಿಕ್ಷಣ ಬಗ್ಗೆ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳನ್ನು ಸುಧಾರಣೆ ಮಾಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೂ 2 ಕೋಟಿಯಿಂದ 5 ಕೋಟಿ ರೂ. ವರೆಗೆ ಅನುದಾನ ನೀಡಲಾಗಿದೆ. ಶೋಷಿತ, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಡ ಜನರಿಗೆ ವಸತಿ ಯೋಜನೆಯಡಿ ದಾಖಲೆಯ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಹಿಂದಿನ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಾಕಷ್ಟು ಅನುದಾನ ನೀಡಿ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಆದ್ದರಿಂದ ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಗ್ರಾಮಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಇಸ್ಲಾಂಪುರ, ಚಿಕ್ಕಲದಿನ್ನಿ, ಹೊಸಗಾಡ, ಶಹಾಬಂದರ, ರಾಜಾಕಟ್ಟಿ, ಯಲ್ಲಾಪುರ ಗ್ರಾಮಸ್ಥರು ಇದ್ದರು.