ಯಮಕನಮರಡಿ ಮತಕ್ಷೇತ್ರದ ಗ್ರಾಮಗಳಲ್ಲಿ 20 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಸತೀಶ್ ಜಾರಕಿಹೊಳಿ
ಯಮಕನಮರಡಿ: ರಾಜ್ಯದಲ್ಲಿಯೇ ಅಭಿವೃದ್ಧಿ ವಿಷಯದಲ್ಲಿ ಯಮಕನಮರಡಿಯನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದು, ಕ್ಷೇತ್ರದ ಜನರು, ಯುವಕರು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.
ಯಮಕನಮರಡಿ ಮತಕ್ಷೇತ್ರದಲ್ಲಿ 2 ಕೋಟಿ ರೂ. ವೆಚ್ಚದ ಕರಗುಪ್ಪಿ-ಕರಿಕಟ್ಟಿ ಕ್ರಾಸ್ ವರಿಗೆ ರಸ್ತೆ ನಿರ್ಮಾಣ, 3 ಕೋಟಿ ರೂ. ವೆಚ್ಚದ ಕಲ್ಲಟ್ಟಿ-ಇಸ್ಲಾಂಪೂರವರಿಗೆ ರಸ್ತೆಗೆ ಚಾಲನೆ, 5 ಕೋಟಿ ರೂ, ವೆಚ್ಚದಲ್ಲಿ ನಿರ್ಮಿಸಿದ್ದ ಇಸ್ಲಾಂಪೂರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, 1 ಕೋಟಿ ರೂ. ವೆಚ್ಚದ ಇಸ್ಲಾಂಪೂರ ಗ್ರಾಮದಲ್ಲಿ ಜಲ ಜೀವನ ಯೋಜನೆ ಕಾಮಗಾರಿ, 4 ಕೋಟಿ ವೆಚ್ಚದ ದಂಡಿಕೇರಿಯಿಂದ-ಶಹ ಬಂದರ ಕ್ರಾಸ್ ವರೆಗೆ ರಸ್ತೆ ನಿರ್ಮಾಣ, 5 ಕೋಟಿ ವೆಚ್ಚದ ಶಹಾಬಂದರ್ ಕ್ರಾಸ್ ದಿಂದ ಹೊಸ ವಂಟಮೂರಿ ಗ್ರಾಮದವರಿಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 15 ವರ್ಷಗಳ ಅವಧಿಯಲ್ಲಿ ಮತಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಮುಂದೆಯೂ ಶೈಕ್ಷಣಿಕ ಪ್ರಗತಿಗಾಗಿ, ರೈತರ ಏಳ್ಗೆಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಓಟು ಕೇಳುವುದಿಲ್ಲ. ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್‌ನ್ನು ಬೆಂಬಲಿಸಬೇಕು. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಇರುವ ತನಕ ಯಾರಿಂದಲೂ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ. ಕೆಲವರಿಂದ ಅಪಪ್ರಚಾರ ನಡೆಸಲಾಗುತ್ತಿದೆ. ಅಂತಹ ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ, ತಾಪಂ ಸದಸ್ಯರು, ಕರಗುಪ್ಪಿ,ಕರಿಕಟ್ಟಿ , ಇಸ್ಲಾಂಪೂರ, ದಂಡಿಕೇರಿ, ಶಹಾಬಂದರ್ ಗ್ರಾಮದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಗುರು-ಹಿರಿಯರು, ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.