ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹೇರಲು ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ, ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ವಡಗಾವಿಯಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಬೇಸತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುತ್ತಲೇ ಇದ್ದಾರೆ. ಅಡುಗೆ ಅನಿಲ ಬೆಲೆ ಏರಿಕೆಯಾಗುತ್ತಲೇ ಇದೆ. ನಮ್ಮ ಸರ್ಕಾರದ ಅವಧಿಯಲ್ಲಿ ಸಿಲಿಂಡರ್‌ಗೆ ₹ ೪೦೦ ಇತ್ತು. ಈಗ ₹ ೧೧೦೦ ಆಗಿದೆ. ಎಲ್ಲ ವಸ್ತುಗಳ ಬೆಲೆ ಶೇ. ೧೮ ರಷ್ಟು ತೆರಿಗೆ ಕೊಡಬೇಕು. ಅದು ನಮಗೆ ಗೊತ್ತಿಲ್ಲದೇ ಮೋದಿ ಅಕೌಂಟ್‌ಗೆ ಹೋಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ. ಬೆಲೆ ಏರಿಕೆಯಿಂದಾಗಿ ನೇಕಾರರು ಕೂಡ ಸಂಕಷ್ಟದಲ್ಲಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ಸಿಗುವಂತೆ ಮಾಡಬೇಕಿದೆ ಎಂದರು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗೆ ಎಲ್ಲರೂ ಕೂಡಿ ಶ್ರಮಿಸಬೇಕು. ಈ ಮೊದಲು ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸಂಘಟನೆ ಕಡಿಮೆ ಇದೆ ಎಂಬ ಭಾವನೆ ಇತ್ತು. ಆದರೆ, ಈಗ ಇಲ್ಲಿಯೂ ಪಕ್ಷದ ಸಂಘಟನೆ ಪ್ರಬಲವಾಗಿದೆ. ಹಾಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ ಎಂಬ ಶಕ್ತಿ ಬಂದಿದೆ. ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿರುವುದರಿಂದ ಪಕ್ಷದ ಸಂಘಟನೆ ಪ್ರಬಲವಾಗಿದೆ ಎಂದರು.
ವಿಶೇಷವಾಗಿ ನಮ್ಮ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡುತ್ತಿರುವುದರಿಂದ ಪಕ್ಷದ ಕಾರ್ಯಚಟುವಟಿಕೆಗಳಿಗೆ ಕಚೇರಿ ಬೇಕಿತ್ತು. ಇದು ಚುನಾವಣೆಯೊಳಗೆ, ನಂತರವೂ ನಿರಂತರವಾಗಿ ಪಕ್ಷದ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗಲಿದೆ . ೭೦ ವರ್ಷಗಳ ಇತಿಹಾಸದಲ್ಲಿ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸ ಇರಲಿಲ್ಲ. ಅದನ್ನು ಅಂಜಲಿ ನಿಂಬಾಳ್ಕರ ಅವರು ಸುಳ್ಳು ಮಾಡಿ ತೋರಿಸಿದ್ದಾರೆ.ಅಲ್ಲಿ ಸಂಘಟನೆ ಮಾಡಿದ್ದಾರೆ. ಖಾನಾಪುರ ಮಾದರಿಯಲ್ಲೇ ಬೆಳಗಾವಿ ದಕ್ಷಿಣದಲ್ಲಿ ಪಕ್ಷದ ಸಂಘಟನೆ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ಜಿಲ್ಲಾಧ್ಯಕ್ಷ ರಾಜು ಸೇಠ್, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ರಮೇಶ ಸೊಂಟಕ್ಕಿ, ಪ್ರದೀಪ ಎಂ.ಜೆ. ರಮೇಶ ಗೋರಲ್ ಮೊದಲಾದವರು ಉಪಸ್ಥಿತರಿದ್ದರು.