ಹೆಬ್ಬಾಳ ಜಿಪಂ ವ್ಯಾಪ್ತಿಯ ಅರ್ಜುನವಾಡದಲ್ಲಿ 3 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಬ್ರಿಜ್ ಕಮ್ ಬ್ಯಾರೇಜ್‌ಯನ್ನು ಲೋಕಾರ್ಪಣೆಗೊಳಿಸಿದ ಶಾಸಕ ಸತೀಶ್ ಜಾರಕಿಹೊಳಿ
* ಎರಡು ರೂಪಾಯಿ ಭಕ್ತರು ನನ್ನನ್ನು ಸೋಲಿಸಬೇಕೆಂದು ನಿರ್ಧರಿಸಿದ್ದರಿಂದ ನಾನೇ ಮತ್ತೆ ಯಮಕನಮರಡಿ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ ಎಂದ ಸಾಹುಕಾರ್
* ದೇವಸ್ಥಾನಗಳಿಗೆ 5 ಲಕ್ಷ ರೂ. ಅನುದಾನ ನೀಡಿ ಹತ್ತು ಪೋಸ್ಟರ್ ಹಚ್ಚುವ ಬಿಜೆಪಿಯವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಇಲ್ಲ
ಯಮಕನಮರಡಿ: ಅರ್ಜುನವಾಡ ಗ್ರಾಮದಲ್ಲಿ ನಿರ್ಮಿಸಿದ್ದ ಬ್ರಿಜ್ ಕಮ್ ಬ್ಯಾರೇಜ್‌ನಿಂದ ಕುರಣಿ, ಕೋಚರಿ ಸೇರಿದಂತೆ ಮತಕ್ಷೇತ್ರದ ಅನೇಕ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಹೆಬ್ಬಾಳ ಜಿಪಂ ವ್ಯಾಪ್ತಿಯ ರೈತರ ಬಹುದಿನಗಳ ಬೇಡಿಕೆಯಾದ ಅರ್ಜುನವಾಡ ಗ್ರಾಮದಲ್ಲಿ 3 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಬ್ರಿಜ್ ಕಮ್ ಬ್ಯಾರೇಜ್ ಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶೈಕ್ಷಣಿಕ ಪ್ರಗತಿ, ರೈತರ ಆರ್ಥಿಕ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.
ನಿಮ್ಮ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿದ್ದೇನೆ. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು,ಇನ್ನೂ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಬರುವ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿದರೆ ಯಮಕನಮರಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಈಗಗಲೇ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ, ಪ್ರತಿ ಮಹಿಳೆಗೆ 2000 ಸಾವಿರ ರೂ. ನೀಡಲಾಗುವುದು ಎಂದು ಘೋಷಿಸಲಾಗಿದೆ. ಗ್ಯಾರೇಂಟಿ ಕಾರ್ಡ್ ಗಳನ್ನು ಮನೆ ಮನೆಗೆ ನೀಡಲಾಗುತ್ತಿದ್ದು, ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿಮ್ಮ ಎರಡು ಜೇಬಿಗೆ ಕೈ ಹಾಕಿದೆ. ಈ ಡಬಲ್ ಇಂಜಿನ್ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಯೋಗ್ಯತೆ ಇಲ್ಲ. ಆದರೆ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಮತಕ್ಷೇತ್ರದಲ್ಲಿ ದೇವಸ್ಥಾಗಳಿಗೆ 5 ಲಕ್ಷ ರೂ. ನೀಡಿ ಹತ್ತು ಪೋಸ್ಟರ್ ಹಚ್ಚುತ್ತಿರುವ ಬಿಜೆಪಿಯವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ಟೀಕಿಸಿದ ಅವರು, ನಾವು ಅರ್ಜುನವಾಡ ಗ್ರಾಮದಲ್ಲಿ ಮಾತ್ರ 13 ಕೋಟಿ ರೂಪಾಯಿ ಅಭಿವೃದ್ಧಿ ಕೆಲಸ ಮಾಡಿದರೂ ಯಾವತ್ತೂ ಪ್ರಚಾರ ಬಯಸಲಿಲ್ಲ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರು ಶ್ರೀಮಂತರ ಪಟ್ಟಿಯಲ್ಲಿ 600ನೇ ಸ್ಥಾನದಲ್ಲಿದ್ದ ಅದಾನಿಯನ್ನು 2ನೇ ಸ್ಥಾನಕ್ಕೆ ಕೂಡಿಸಿದರು. ಆದರೆ ಇವತ್ತು ಅದಾನಿ ಸ್ಥಿತಿ ಎನಾಗಿದೆ ಎಂದು ನಿವೇ ನೋಡುತ್ತಿದ್ದಿರಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರ ಕನ್ನಡ ಭಾಷೆ ನಿಮಗೆ ತಿಳಿಯಲ್ಲ. ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜನರಿಗೆ ಅಭಿವೃದ್ಧಿ ಬಗ್ಗೆ ಕೇಳಬೇಡಿ ಎನ್ನುತ್ತಾರೆ. ಸಮಾಜದಲ್ಲಿ ದ್ವೇಷದ ರಾಜಕೀಯ ಮಾಡಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದು,ಇಂತವರಿಗೆ ಬುದ್ದಿ ಕಲಿಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು.
ದೇಶದಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮೋದಿಯವರು ಅಧಿಕಾರಕ್ಕೆ ಬರುವಕ್ಕಿಂತ ಮೊದಲು ದಿನಸಿ ಪದಾರ್ಥಗಳ, ಪೆಟ್ರೋಲ್-ಡಿಸೇಲ್ ಬೆಲೆ ಎಷ್ಟು ಇತ್ತು..? ಈಗ ಎಷ್ಟು ಇದೆ ಅಂತಾ. ಚುನಾವಣೆ ಬಂದಾಗ ಬಿಜೆಪಿಯವರು ಹುಕ್ಕೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುತ್ತೇವೆ, ಹೆಬ್ಬಾಳದಲ್ಲಿ ಬುಲೆಟ್ ಟ್ರೆನ್ ಓಡಿಸುತ್ತೇವೆ ಎಂದು ಹೇಳುತ್ತಾರೆ. ಸುಳ್ಳೆ ಬಿಜೆಪಿಗರ ಬಂಡವಾಳ. ಹೀಗಾಗಿ ಇಂತಹ ಹೇಳಿಕೆಗಳಿಗೆ ಮರುಳಾಗಬೇಡಿ ಎಂದು ಹೇಳಿದರು.
ನಾನು ಬೇರೆ ಕಡೆ ಚುನಾವಣೆಗೆ ನಿಂತು ಯಮಕನಮರಡಿಯಲ್ಲಿ ಪ್ರಿಯಂಕಾನನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೆ, ಆದರೆ ಎರಡು ರೂಪಾಯಿ ಭಕ್ತರು ನನ್ನನ್ನು ಸೋಲಿಸಬೇಕೆಂದು ನಿರ್ಧರಿಸಿದ್ದರಿಂದ ನಾನೇ ಮತ್ತೆ ಯಮಕನಮರಡಿಯಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ನನ್ನ ಆಯ್ಕೆ ನಿಮ್ಮ ಕೈಯಲ್ಲಿ ಇದ್ದು, ಅಭಿವೃದ್ಧಿಗೆ ಆದ್ಯತೆ ನೀಡುವ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ವೇಳೆ ಕೋಚರಿ, ಕುರಣಿ, ಅರ್ಜುನವಾಡಗಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಸದಸ್ಯರು
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಅರ್ಜುನವಾಡ ಸರ್ಕಾರಿ ಪ್ರೌಢಶಾಲಾ ಮಕ್ಕಳು ರೈತ ಗೀತೆ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಮಹಾಂತೇಶ ಮಗದುಮ್, ರೇವಣ್ಣ ಮಾಳಂಗಿ, ಶಿವಾನಂದ ಕರಗುಪ್ಪಿ, ಲಕ್ಷ್ಮಿಕಾಂತ, ಮಲ್ಲಪ್ಪಾ ಮುಗಳೆ, ಮಾರುತಿ ಕುಂದಿ, ಎನ್.ಎಸ್. ಪಾಟೀಲ ಸೇರಿದಂತೆ ಕೋಚರಿ, ಕುರಣಿ, ಅರ್ಜುನವಾಡಗಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಪಂ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಇದ್ದರು.