ಬೆಳಗಾವಿ: ಮೋದಿ ಸರ್ಕಾರದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಮಧ್ಯಮ ಮತ್ತು ಬಡವರ್ಗ ಸೇರಿದಂತೆ ಯಾರಿಗೂ ಬಜೆಟ್ನಿಂದ ಅನುಕೂಲವಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದರು.
ನಗರದಲ್ಲಿ ಬಜೆಟ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಮತ್ತು ಅದಕ್ಕೆ ಸಂಬಂಧಿಸಿ ವಿಷಯದಲ್ಲಿ ಬಜೆಟ್ನಲ್ಲಿ ಏನೂ ಇಲ್ಲ. ಖಾಸಗಿ ಬಂಡವಾಳ ಹೂಡಿಕೆ ಹಾಗೂ ಎಮ್ಎಸ್ಎಮ್ಇಗಳ ಸ್ಥಾಪನೆಗೆ ಅಗತ್ಯ ಕ್ರಮಗಳ ಬಗ್ಗೆಯೂ ತಿಳಿಸಿಲ್ಲ. ಸರ್ಕಾರಿ ಉದ್ಯೋಗದ ಬಗ್ಗೆಯೂ ಬಜೆಟ್ನಲ್ಲಿ ಯಾವುದೇ ಮಾರ್ಗಸೂಚಿ ಇಲ್ಲ. ನಿರುದ್ಯೋಗದ ಕುರಿತು ಬಜೆಟ್ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ ಎಂದು ಹರಿಹಾಯ್ದರು.
ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಭಾರತದ ಬೆಳವಣಿಗೆಯ ಮೂಲ. ಅವುಗಳಿಗೂ ಯಾವುದೇ ಪ್ರಾಶಸ್ತ್ಯ ನೀಡಿಲ್ಲ. ಕೇವಲ ಹಳೆಯ ಯೋಜನೆಗಳನ್ನೇ ಮತ್ತೆ ಪಾಲಿಶ್ ಮಾಡಿ ಮಂಡಿಸಲಾಗಿದೆ ಮತ್ತು ಅದಕ್ಕೆ ಒಂದಿಷ್ಟು ಬಂಡವಾಳವನ್ನು ಹೆಚ್ಚಾಗಿ ಹೂಡಿಕೆ ಮಾಡಲಾಗಿದೆ. ರೈತರ ಬೇಡಿಕೆಯ ಬೆಂಬಲ ಬೆಲೆಯ ಬಗ್ಗೆ ಬಜೆಟ್ನಲ್ಲಿ ಯಾವುದೇ ದೃಷ್ಟಿಕೋನಗಳಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಟೀಕಿಸಿದರು.