ಬೆಳಗಾವಿ: ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿಯವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಬೆಳಗಾವಿಯ ಆಟೋ ನಗರದ ಉದಯ ಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದರಿಂದ ಎರಡು ವಿಭಾಗ ಮಾಡಿದ್ದು, ನಾಳೆ ಚಿಕ್ಕೋಡಿ, ಬೆಳಗಾವಿ ಎರಡೂ ಕಡೆ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.
ಬಸ್ ಯಾತ್ರೆ ಐತಿಹಾಸಿಕವಾಗಿಸಲು ಕಾಂಗ್ರೆಸ್ ಪಕ್ಷ ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿಯ ವೀರಸೌಧದಿಂದಲೇ ಬಸ್ ಯಾತ್ರೆ ಆರಂಭವಾಗಲಿದೆ ಎಂದು ಹೇಳಿದರು.
ಚಿಕ್ಕೋಡಿ, ಬೆಳಗಾವಿಯಲ್ಲಿ ನಡೆಯುವ ಸಮಾವೇಶದಲ್ಲಿ ಸುಮಾರು 15 ರಿಂದ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದ ಅವರು, ಈ ಯಾತ್ರೆಯಿಂದ ಚುನಾವಣೆಗೆ ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಊಟದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಮಾಜಿ ಸಚಿವ ವೀರಕುಮಾರ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಮುಖಂಡರಾದ ಪ್ರದೀಪ್ ಎಂ,ಜೆ, ಸಿದ್ದಿಕ್ ಅಂಕಲಗಿ, ರಾಜು ಸೇಠ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಜೋಶಿ, ಸರಳಾ ಸಾತ್ಪುತೆ ಸೇರಿದಂತೆ ಇತರರು ಇದ್ದರು.