ಯಮಕನಮರಡಿ: ಬಸವಣ್ಣನವರು ಹೇಳಿದಂತೆ ಕಾಯಕದಲ್ಲೇ ಕೈಲಾಸ ಕಾಣುವ ಮೂಲಕ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಸದುದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಹಳ್ಳಿಗಳ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದರು ಎಂದು ತಿಳಿಸಿದರು.
ಹೀಗಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳ ಪ್ರಗತಿಗೆ ನಾನು ಬದ್ಧನಾಗಿದ್ದು, ನಿಮ್ಮ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದರೆ ಅವುಗಳಿಗೆ ಶೀಘ್ರ ಸ್ಪಂದಿಸಲಾಗುದು ಎಂದು ಭರವಸೆ ನೀಡಿದರು.
ಹುದಲಿ ಜಿಪಂ ವ್ಯಾಪ್ತಿಯ ರಂಗಧೋಳಿ ಗ್ರಾಮದಲ್ಲಿ 80. ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ, ಕುಮರಿ ಗ್ರಾಮದ 80 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ, 50 ಲಕ್ಷ ರೂ. ವೆಚ್ಚದ ಹುದಲಿ ಗ್ರಾಮದ ಮುಖ್ಯ ರಸ್ತೆ ಕಾಮಗಾರಿ. 40 ಲಕ್ಷ ರೂ. ವೆಚ್ಚದ ಹುದಲಿ ಗ್ರಾಮದ ಬಂಡಮ್ಮನ ಗುಡಿಯ ಹೊಲದ ರಸ್ತೆ ಕಾಮಗಾರಿ. ಹುದಲಿ – ಕರವಿನಕುಂಪಿ ಕ್ರಾಸ್ ವರೆಗೆ ಸುಮಾರು 5 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿ ಮತ್ತು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಧರನಟ್ಟಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇದೇ ವೇಳೆ ಹುದಲಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆಯನ್ನು ಗ್ರಾಮದ ಗುರು ಹಿರಿಯರು ಮತ್ತು ಮುಖಂಡರ ಸಮ್ಮುಖದಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ರಂಗಧೋಳಿ, ಕುಮರಿ, ಹುದಲಿ, ಧರನಟ್ಟಿ ಗ್ರಾಮದ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಸಾರ್ವಜನಿಕರು ಇದ್ದರು.