ಬೆಳಗಾವಿ: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಈಗ ಅಪ್ರಸ್ತುತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ನೂತನ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ತರಲಾಗುವುದು ಆ ಬಳಿಕ ಸಿಎಲ್ ಪಿ ಮೀಟಿಂಗ್, ಹೈಕಮಾಂಡ್ ಮುಂದಿನ ಸಿಎಂ ಯಾರಾಗಬೇಕು ಎಂದು ನಿರ್ಧರಿಸುತ್ತೆ ಎಂದರು.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಯವಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರಲ್ಲಿ ಏನೇ ಇದ್ರು ಕೂಡ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಕಾರ್ಯಕರ್ತರ ಮೇಲೆ ಪಕ್ಷ ನಡೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಿಎಂ ಇಬ್ರಾಹಿಂ ಅವರೊಂದಿಗೆ ನಾನು ಈಗಾಗಲೇ ಚರ್ಚೆ ಮಾಡಿದ್ದೇನೆ. ಅವರು ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ನಮ್ಮ ಜತೆಯೇ ಇರಲಿದ್ದಾರೆ. ಸಿಎಂ ಇಬ್ರಾಹಿಂ ಪಕ್ಷದೊಳಗಿನ ಕೆಲವು ಸಮಸ್ಯೆಗಳು ಬಗ್ಗೆ ಹೇಳಿದ್ದಾರೆ. ಅವುಗಳನ್ನ ಸರಿಪಡಿಸುವ ಪ್ರಯತ್ನ ಮಾಡುತ್ತೇವೆ- ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ.
ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಮಹನಗರ ಪಾಲಿಕೆ ಎದುರಿಸುವ ಸಂಬಂಧ ಕಮಿಟಿ ರಚನೆ ಮಾಡಲಾಗಿದೆ. ಈಗಾಗಲೇ ಒಂದು ಬಾರಿ ಸಭೆ ನಡೆಸಲಾಗಿದ್ದು, ಕೆಲವರು ಪಕ್ಷದ ಚಿಹ್ನೆ ಬೇಕು ಎಂದ್ರೆ ಇನ್ನು ಕೆಲವರ ಬೇಡ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಗೊಂದಲವಿದ್ದು, ಹೈಕಮಾಂಡ್ ನಿರ್ಧಾರ ಏನು ಬರಲಿದೆ ಎಂದು ಕಾಯ್ದು ನೋಡೋಣ. ಸದ್ಯ ಚುನಾವಣೆ ನಮ್ಮ ತಯಾರಿ ನಡೆಯುತ್ತಿದೆ ಎಂದಷ್ಟೇ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸುನೀಲ್ ಹನುಮನ್ನವರ್, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಮುಂತಾದವರು ಇದ್ದರು.