ನವಲಗುಂದ: ನವಲಗುಂದ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣವಾಗಿ ಇಂದು ಉದ್ಘಾಟನೆಯಾಗುತ್ತಿದ್ದು ಸಂತಸ ಮೂಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 15 ವರ್ಷದ ಹಿಂದೆ ಈ ಸ್ಥಳ ವೀಕ್ಷಿಸಲು ಬಂದಿದೆ. ಆವಾಗ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಡಿಮೆ ಇತ್ತು, ಆದರೆ ಪ್ರಸ್ತುತ ಅನುದಾನ ಸಾಕಷ್ಟು ಇದೆ. ಆದ್ದರಿಂದ ನಿರ್ಮಾಣಗೊಂಡ ಸಮುದಾಯ ಭವನಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮುದಾಯ ಭವನಗಳನ್ನು ಕಟ್ಟುವುದು ಸುಲಭ. ಆದರೆ ಅವುಗಳನ್ನು ನಿರ್ವಹಣೆ ಮಾಡುವುದು ಕಷ್ಟವಿದೆ. ಸಮಾಜದ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಸಮುದಾಯ ಭವನದಲ್ಲೇ ಹಮ್ಮಿಕೊಂಡರೆ ಒಳ್ಳೆಯದು ಎಂದ ಅವರು, ಈ ಭವನ ಎಲ್ಲಾ ಸಮುದಾಯಗಳಿಗೆ ಅನುಕೂಲವಾಗಲಿ ಎಂದು ತಿಳಿಸಿದರು.
ನವಲಗುಂದ ಪಟ್ಟಣದಲ್ಲಿ ಭವನ ನಿರ್ಮಾಣವಾದರೆ ಸಾಲದು, ಮೀಸಲಾತಿಯ ಬಗ್ಗೆ ಗಮನ ಹರಿಸಬೇಕು. ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀಗಳ ಸುದೀರ್ಘ ಹೋರಾಟದಿಂದ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಸಮಾಜಕ್ಕೆ ಮೀಸಲಾತಿಯನ್ನು ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಮೀಸಲಾತಿ ಕಲ್ಪಿಸಲು ಆಯೋಗ ರಚನೆ ಮಾಡಿದ್ದರಿಂದ ಇವತ್ತು ಮೀಸಲಾತಿ ದೊರಕಿದೆ ಎಂದು ತಿಳಿಸಿದರು.
ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕರಾದ ಸಂತೋಷ ಲಾರ್ಡ್, ಎಚ್.ಎನ್. ಕೋನರಡ್ಡಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಮಾಜಿ ಜಿಪಂ, ತಾಪಂ ಸದಸ್ಯರು ಸೇರಿದಂತೆ ಸಮಾಜದ ಬಾಂಧವರು ಇದ್ದರು.