ಗೋಕಾಕ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ ಜೋಡೋ ಪಾದಯಾತ್ರೆ ಈಗಾಗಲೇ ಮೈಸೂರಿನಲ್ಲಿ ಅದ್ಧೂರಿಯಾಗಿ ಸಾಗುತ್ತಿದ್ದು, ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಅ. 11ನೇ ತಾರೀಖು ಹಿರಿಯೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕೆಂದು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.
ನಗರದ ಅರ್ಬನ್ ಬ್ಯಾಂಕ್‌ನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆ ಸಿದ್ದತೆ ಬಗ್ಗೆ ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರಾದ ಸತೀಶ್ ಜಾರಕಿಹೊಳಿ ಅವರು ಪೂರ್ವಭಾವಿ ಸಭೆ ನಡೆಸಿ ತಿಳಿಸಿದ್ದಾರೆ ಎಂದರು.
ಜಿಲ್ಲೆಯ ಎಲ್ಲಾ ಶಾಸಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ನೀವು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿಯವರಿಗೆ ಶಕ್ತಿ ತುಂಬಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಭಾರತ ಜೋಡೋ ಪಾದಯಾತ್ರೆಗೆ ಕರ್ನಾಟಕದಲ್ಲಿ ಅಪಾರ ಬೆಂಬಲ ದೊರೆಯುತ್ತಿದ್ದು, ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇನ್ನಷ್ಟು ಬಲ ನಿಡೋಣ. ನಾವು ಕೂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶದಲ್ಲಿ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ್ ಜತ್ತಿ, ಸಿದ್ಧಲಿಂಗ ದಳವಾಯಿ, ಇಮ್ರಾನ್ ತಪ್ಪಿಕರ, ಕಲ್ಲಪ್ಪ ಗೌಡರ ಲಕ್ಕಾರ, ಪ್ರವೀಣ ಗುಡ್ಡಕಾಯಿ, ಡಿ. ಈಶ್ವರ, ರಹಮಾನ್ ಮೊಕಾಶಿ, ಜಾಕಿರ ನದಾಬ, ಶಿವನಗೌಡ ಪಾಟೀಲ್,
ಗೌಡಪ್ಪಾ ಹೊಳಯಾಜಿ, ಮಂಜುಳ ರಾಮಗಾನಟ್ಟಿ, ಸುಜಾತಾ ಹಿರೇಮಠ, ಅಲಿಯನ್ ಶೇಖ್ಜೀ, ಮುಸ್ತಕಿಂ ಕಾಮತ್ನೂರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಇದ್ದರು”