ರಾಯಬಾಗ: ‘ ಪ್ರಧಾನಿ ಮೋದಿಯ ಬಣ್ಣದ ಮಾತಿಗೆ ಈಗಾಗಲೇ ದೇಶ ಮರುಳಾಗಿದೆ. ಇದೇನು ಹೊಸದೆನಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಏನು ಹೊಸದಲ್ಲ. 1965ರಲ್ಲಿಯೇ ನೆಹರು ಅವರು ಜಾರಿಗೆ ತಂದಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಅದಕ್ಕೆ ಸುಣ್ಣ ಬಣ್ಣ ಬಳೆದು, ಅಲಂಕರಿಸಿ ಹೊರಟ್ಟಿದ್ದಾರೆ. ದೇಶದ ಜನರು ಬಣ್ಣದ ಮಾತಿಗೆ ಮರುಳಾಗದೆ. ಮತ್ತೆ ವಸ್ತುಸ್ಥಿತಿಗೆ ಬರಬೇಕು ಎಂದರು.
‘ ರಾಯಬಾಗ, ಕುಡಚಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಮತ್ತೆ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ, ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಬಿ.ಎಸ್.ಯಡಿಯೂರಪ್ಪ, ಮೋದಿ ನೇತೃತ್ವದ ಸರ್ಕಾರಗಳ ವೈಫಲ್ಯಗಳನ್ನು ಜನರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕೆಂದರು’.
‘ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬೇಕಾದರೆ. ರಾಯಭಾಗ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಪಂ. ಸ್ಥಾನಗಳನ್ನು ಕಾರ್ಯಕರ್ತರು ಗೆಲ್ಲಿಸಿ ಕೊಡಬೇಕು. ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು’ ಎಂದರು.
‘ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿನ ಕಾರ್ಯಗಳು ಚುರುಕುಗೊಂಡಿವೆ. ಹೊಸ ಚೈತನ್ಯ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಶ್ರಮ ವಹಿಸಿ ಕೆಲಸ ಮಾಡಬೇಕು. ನೀವು ಮಾಡುವ ಕೆಲಸಕ್ಕೆ ಪ್ರತಿಫಲ ದೊರೆಯಲಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ರಾಯಬಾಗ ಕಾಂಗ್ರೆಸ್ ಮುಖಂಡ ಮಹಾವೀರ ಮೋಹಿತೆ, ಮಾಜಿ ಶಾಸಕ ಶ್ಯಾಮ ಘಾಟಗೆ, ಮಾಜಿ ಸಚಿವ ವೀರಕುಮಾರ್ ಪಾಟೀಲ, ಕುಡಚಿ ರಾಯಬಾಗ ಉಸ್ತುವಾರಿ ಎಲ್.ಹನುಮಂತ, ಸುನೀಲ ಹನಮಣ್ಣವರ, ಅರ್ಜುನ್ ನಾಯ್ಕವಾಡಿ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷ ತೇಜಸ್ವಿನಿ ನಾಯ್ಕವಾಡಿ, ಬಾನೆ ಸರಕಾರ ಸೇರಿದಂತೆ ಇತರರು ಇದ್ದರು.