ಶಿಕ್ಷಣಕ್ಕೆ ನಮ್ಮ ಪ್ರಥಮ ಆದ್ಯತೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಹುಕ್ಕೇರಿ: ಮತಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನಾವು ಹೆಚ್ಚು ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಡಿ.ಬಿ. ಹೆಬ್ಬಾಳಿ ಪಿ.ಯು ಕಾಲೇಜಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯ ನಿರ್ಮಾಣ ಮಾಡುವ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುತ್ತಿರುವುದು ತುಂಬಾ ವಿಶೇಷವಾಗಿದೆ ಎಂದು ತಿಳಿಸಿದರು.
ಕಲಿಕೆಗೆ ಅವಕಾಶ ಸಿಕ್ಕಾಗ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕು. ಅಂದಾಗ ಮಾತ್ರ ವಿದ್ಯಾರ್ಥಿ ಜೀವನ ಸ್ವಾರ್ಥಕವಾಗುತ್ತದೆ ಎಂದು ತಿಳಿಸಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಸರ್ಕಾರದ ಸೌಲಭ್ಯಗಳನ್ನು ಪಡೆದು ಶೈಕ್ಷಣಿಕ ರಂಗದಲ್ಲಿ ಪ್ರಗತಿ ಕಾಣಬೇಕೆಂದು ಕರೆ ನೀಡಿದರು.
ಜನಸಂಖ್ಯೆ ಪ್ರತಿವರ್ಷ ಏರಿಕೆ ಆಗುತ್ತಿದ್ದು, ಹೀಗಾಗಿ ಎಲ್ಲಾ ರಂಗಗಳಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಒದಗಿಸಬೇಕಾಗುತ್ತದೆ. ಉಳ್ಳಾಗಡ್ಡಿ ಖಾನಾಪುರಲ್ಲಿ ಪದವಿ ಕಾಲೇಜು ಆಗಬೇಕೆಂಬ ಜನರ ಬಹಳ ದಿನದ ಒತ್ತಾಯವಿದೆ. ಆದಕಾರಣ ಈ ಬೇಡಿಕೆ ಶೀಘ್ರ ನೆರವೇರಿಸಲಾಗುವುದು ಎಂದರು.
ಜಗತ್ತಿನಲ್ಲಿ ಕಳ್ಳತನವಾಗದ ವಸ್ತು ಅಂದರೆ ಅದು ಜ್ಞಾನ ಮಾತ್ರ. ಆದ್ದರಿಂದ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕಬಾರದು, ಯಾವುದೇ ಒಂದು ಸಂಸ್ಥೆ ಬೆಳೆಯಬೇಕಾದರೆ ಸಮಯವನ್ನು ಆ ಸಂಸ್ಥೆಗೆ ನೀಡಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪಾರೀಶಗೌಡ ಪಾಟೀಲ್, ಸುದೀರ್ ಗಿರಿಗೌಡರ, ಅಂಜನಾ ಹೆಬ್ಬಾಳ್ಳಿ, ಮಹಾಂತೇಶ ಮಗದುಮ್, ಮಲ್ಲಪ್ಪ ಮುಗಳಿ, ಯಲ್ಲಪ್ಪ ಹಂಚಿನಮನಿ, ಮಹಾವೀರ ಸಣಕಿ, ಬಸವರಾಜ ಗಿರಿಮಲ್ಲನ್ನವರ್, ರಾಜು ಅವತೆ ಸೇರಿದಂತೆ ಶ್ರೀ ಡಿ.ಬಿ. ಹೆಬ್ಬಾಳಿ ಪಿ.ಯು ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಇದ್ದರು.