ಘಟಪ್ರಭಾ: ನೂತನವಾಗಿ ನೇಮಕಗೊಂಡ 25 ಪದಾಧಿಕಾರಗಳು ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಡಾ. ಎನ್. ಎಸ್. ಹರ್ಡೇಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಕಮಿಟಿಯ ಮುಂಚೂಣಿಯ 25 ಘಟಕಗಳ 52 ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿ, ದೇಶದ ಜನರಿಗೆ ಈಗ ಕಾಂಗ್ರೆಸ್ ಬೇಕಾಗಿದ್ದು, ಕಾಂಗ್ರೆಸ್ನ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಅಲ್ಲದೇ ಬ್ಲಾಕ್ ಹಾಗೂ ವಾರ್ಡ್ಗಳಿಗೆ ಹೋಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿಯವರು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಈಗ ಬಿಜೆಪಿಯ ವರ್ಚಸ್ಸು ಕಳೆದಿಕೊಂಡಿದೆ. ಈ ನಿಟ್ಟಿನಲ್ಲಿ ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಬೇಕು’ ಎಂದು ನೂತನ ಪದಾಧಿಕಾರಿಗಳಿಗೆ ತಿಳಿ ಹೇಳಿದರು.
ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನೂತನವಾಗಿ ನೇಮಕಗೊಂಡ 52 ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಶುಭ ಕೋರಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.”