ಗೋಕಾಕ: ಸಂಗೀತ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಅನ್ಯಾಯ ಆಗುತ್ತಿದ್ದು, ಈ ಅನ್ಯಾಯ ತಡೆಗೆ ಸಂಘ-ಸಂಸ್ಥೆಗಳು ಹೆಚ್ಚು ಸಂಗೀತ ಕಾರ್ಯಕ್ರಮ ಹಮ್ಮಿಕೊಂಡು ಕಲಾವಿದರನ್ನು ಬೆಳೆಸಬೇಕೆಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಮಹಾದೇವಪ್ಪ ಮನವಳ್ಳಿ ಸಭಾಭವನದಲ್ಲಿ ಶಾರದಾ ಸಮಗ್ರ ಅಭಿವೃದ್ಧಿ ಸಂಸ್ಥೆಯ ಗಾನಯೋಗಿ ಪಂಚಾಕ್ಷರಿ ಗಾನಕಲಾ ಪರಿಷತ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ಮೂಲಕ ಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದು, ಇತರರು ಕಲಾವಿದರನ್ನು ಪ್ರೋತ್ಸಾಹಿಸಿದರೆ ಅದಕ್ಕೂ ನಾವು ಅಗತ್ಯ ಸಹಾಯ-ಸಹಕಾರ ನೀಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.
ಘಟಫ್ರಭ ಸೇವಾದಳದಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲಿ ವಿದ್ಯೆಯನ್ನು ಕಲಿಯುವುದಕ್ಕೆ ಅಷ್ಟೇ ಅವಕಾಶವಿಲ್ಲ, ಕಲಿಸುವವರಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾರದಾ ಸಮಗ್ರ ಅಭಿವೃದ್ಧಿ ಸಂಸ್ಥೆಯ ಜಯಾನಂದ ಮುನ್ನೊಳ್ಳಿ, ಮಹಾಂತೇಶ ಅಂಬಯ್ಯಾಮಠ ಸೇರಿದಂತೆ ಅನೇಕ ಮುಖಂಡರು, ಕಲಾವಿದರು ಸೇರಿದಂತೆ ಶಾರದಾ ಸಮಗ್ರ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿಯವರು ಇದ್ದರು.”