ಹುಕ್ಕೇರಿ : ತಾಲೂಕಿನ ಯಮಕನಮರಡಿ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಯಾದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಸತೀಶ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಕಾಮಗಾರಿಗಳಲ್ಲಿ ಕಳಪೆ ಮಟ್ಟದ ಕಾಮಗಾರಿ ಕಂಡು ಬಂದಲ್ಲಿ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಮಾಡಿದರು.
ತಾಪಂ, ಜಿಪಂ, ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯಿಂದ ಯಮಕನಮರಡಿ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಅಂದಾಜು ಪತ್ರಿಕೆಯಂತೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಒಂದು ವೇಳೆ ಗುಣಮಟ್ಟದಲ್ಲಿ ಕಳಪೆಯಾದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಜವಾಬ್ದಾರಿಯಾಗಿದ್ದಾರೆ ಎಂದು ಅವರು ಹೇಳಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ 30-40 ಲಕ್ಷ ರೂಗಳ ಹೆಚ್ಚುವರಿ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಜೆಜೆಎಂ ಯೋಜನೆಯಲ್ಲಿ ಪ್ರತಿ ಮನೆ ಮನೆಗೂ ನಳ ಸಂಪರ್ಕ ಮಾಡಬೇಕು. ನೆರೆಹಾವಳಿ ಸಂತ್ರಸ್ಥರ ಮನೆಗಳ ಸಮೀಕ್ಷೆಯನ್ನು ಪಾರದರ್ಶಕವಾಗಿ ಮಾಡಬೇಕು. ಬಸವ ವಸತಿ, ಅಂಬೇಡ್ಕರ ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಅವರು ಹೇಳಿದರು.
ತಹಸೀಲದಾರ ಡಿ.ಎಚ್.ಹೂಗಾರ, ತಾಪಂ ಇಒ ಉಮೇಶ ಸಿದ್ನಾಳ, ಮುಖಂಡರಾದ ಕಿರಣ ರಜಪೂತ, ದಸ್ತಗೀರ ಬಸ್ಸಾಪೂರಿ ಮತ್ತಿತರರು ಉಪಸ್ಥಿತರಿದ್ದರು