ಬೆಳಗಾವಿ: ಮಾನವ ಬಂಧುತ್ವ ವೇದಿಕೆಯ ವತಿಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗಿದ್ದು, ಬೆಳಗಾವಿ, ಗೋಕಾಕ, ಘಟಪ್ರಭ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿಯೂ ಬಸವ ಪಂಚಮಿ ನಿಮಿತ್ತ ಬಡ ಮಕ್ಕಳಿಗೆ, ರೋಗಿಗಳಿಗೆ ಹಾಲು ವಿತರಿಸಲಾಯಿತು.
ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಂಗಳವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ಹಾಲು ವಿತರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಕಳೆದ ನಾಲ್ಕು ವರ್ಷಗಳಿಂದ ಮಾನವ ಬಂಧುತ್ವ ವೇದಿಕೆ ಮಾಡುತ್ತ ಬಂದಿದ್ದೆ. ದೇಶದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಬಳಲಿ, ಸಾವನ್ನಪ್ಪುತ್ತಿದ್ದಾರೆ. ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಾಲು ಕೊಡುವ ಮೂಲಕ ಸಹಾಯ ಮಾಡಲಾಗುತ್ತಿದೆ. ವ್ಯರ್ಥವಾಗಿ ಹಾಲನ್ನು ಕಲ್ಲು, ಮಣ್ಣು ನಾಗಕ್ಕೆ ಎರೆಯುವ ಬದಲು ಬಡಮಕ್ಕಳಿಗೆ ಹಾಲು ವಿತರಿಸಬೇಕು ಎಂದು ಹೇಳಿದರು.
ಕಳೆದ ನಾಲ್ಕು ವರ್ಷಗಳಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಮಾಡಲಾಗುತ್ತಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮಾನವ ಬಂಧುತ್ವ ವೇದಿಕೆ ಮೂಲಕ ನಿರಂತರವಾಗಿ ಮೂಢನಂಬಿಕೆ ವಿರುದ್ಧ ನಿರಂತರವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ.ಅಣ್ಣಾಸಾಬ ಪಾಟೀಲ, ಭರಮಣ್ಣ ತೋಳಿ, ಫಜಲ್ ಮಕಾನದಾರ, ಸಿದ್ಧಿಕ್ ಅಂಕಲಗಿ, ಇಮ್ರಾನ್ ತಪಾಕಿ, ರೋಹಿನಿ ಪಾಜಶೇಟ್, ಪ್ರಕಾಶ ಗುಮ್ನವರ, ಪ್ರಶಾಂತ ಪೂಜಾರಿ, ಬಸವರಾಜ ಹುಲವನ್ನವರ ಮೊದಲಾದವರು ಉಪಸ್ಥಿತರಿದ್ದರು.