ಚಿಕ್ಕಬಳ್ಳಾಪುರ: ಇತಿಹಾಸ ತಿಳಿದುಕೊಳ್ಳಲು ಸಮಯ ಮೀಸಲಿಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು.
ಜಿಲ್ಲೆಯ ಶಿಗ್ಲಘಟ್ಟ ಪಟ್ಟಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಒಕ್ಕೂಟ ಹಮ್ಮಿಕೊಂಡಿದ್ದ ಸಂವಿಧಾನ ಜನಜಾಗೃತಿ ಬೃಹತ್ ಐಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಅಥವಾ ಸಂವಿಧಾನ ಜಾಗೃತಾ ಸಮಾವೇಶದಲ್ಲಿ ಹೆಚ್ಚಿನ ಸಮಯ ಚರ್ಚೆಗೆ ಆದ್ಯತೆ ನೀಡಬೇಕು. ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಿಜೆ, ಮೆರವಣಿಗೆಗೆ ಆದ್ಯತೆ ನೀಡದೇ ತಿಳಿವಳಿಕೆ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೋರಾಟ, ಚಿಂತನೆ, ಶೋಷಣೆ, ಸಮಾಜದ ಕಳಕಳಿಯಿಂದ ನಮಗೆ ಅನುಕೂಲ ಆಗುವ ದೃಷ್ಟಿಯಿಂದ ಸಂವಿಧಾನವನ್ನು ಬರೆದಿದ್ದು, ನಾವೆಲ್ಲರೂ ಸಂವಿಧಾನವನ್ನು ಅಧ್ಯಯನ ಮಾಡಿ ಪ್ರಗತಿಯತ್ತ ಸಾಗಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನ ಪ್ರಕಾಶ ಸ್ವಾಮೀಜಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಮಹಮದ್ ನಾಸಿರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ದಲಿತ ಮುಖಂಡರು ಇದ್ದರು.