ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಮನವಿ
ಬೆಳಗಾವಿ: ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಿ, ಪರಿಶಿಷ್ಟ ಜಾತಿ ಮೀಸಲಾತಿ 15ರಿಂದ 17%, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 3ರಿಂದ ಶೇ 7.5ಕ್ಕೆ ಹೆಚ್ಚಿಸಬೇಕು ಒತ್ತಾಯಿಸಿ ಯುವ ನಾಯಕ ರಾಹುಲ್ ಜಾರಕಿಹೊಳಿಯವರ ನೇತೃತ್ವದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘಟನೆ ಹಾಗೂ ವಾಲ್ಮೀಕಿ ಸಮಾಜದಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೂ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ತಮಗೆ ಸಾಂವಿಧಾನಿಕ ಪಾಲನ್ನು ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ. ಇದು ಅನ್ಯಾಯ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.
ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನ್ಯಾ. ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ ಅದರ ವರದಿಯನ್ವಯ ಮೀಸಲಾತಿ ದೊರಕಿಸುವ ಆಶ್ವಾಸನೆ ಕೊಟ್ಟಿದ್ದರು. ಆದರೆ ಆಶ್ವಾಸನೆ ಮರೆತಿದ್ದು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವರ್ತನೆ ಸರಿಯಲ್ಲ. ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ಬೆಲೆ ತೆರಬೇಕಾಗುತ್ತದೆಂದು ಸರ್ಕಾರಕ್ಕೆ ಸಮುದಾಯಗಳು ಎಚ್ಚರಿಕೆ ಸಂದೇಶ ರವಾನಿಸಿದರು.
ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಾ ಮಹಾಸ್ವಾಮಿಗಳ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಸರ್ಕಾರಗಳು ಶ್ರೀಗಳ ಮಾತಿಗಾದರೂ ಬೆಲೆ ಕೋಡಬೇಕಿದೆ ಎಂದರು.
ಎಸ್ಸಿ-ಎಸ್ಟಿ ಸಮುದಾಯದ ಶಾಸಕರು, ಸಚಿವರು ರಾಜೀನಾಮೆ ನೀಡಲಿ: ರಾಜ್ಯ ಸರ್ಕಾರ ಶೇ.7.5 ಮೀಸಲಾತಿ ಕೊಡಲು ಮೀನಾಮೇಷ ಎಣಿಸುತ್ತಿದೆ. ಇದು ಅಷ್ಟು ಸುಲಭವಾಗಿ ನೀಡುವ ಸರ್ಕಾರವಲ್ಲ ಮೀಸಲಾತಿಗಾಗಿ ವರ್ಷಗಟ್ಟಲೆ ಧರಣಿ ನಡೆಸಲು ನಮ್ಮ ಸ್ವಾಮಿಗಳು ಸಿದ್ದರಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶಕ್ತಿಯಾಗಿ ನಿಲ್ಲಬೇಕು. ನಾಯಕ ಸಮಾಜದ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರೆ ನಾವು ಬೀದಿಗಿಳಿಯುವ ಅಗತ್ಯವಿರುತ್ತಿರಲಿಲ್ಲ. ನಮ್ಮವರ ತಪ್ಪು ಸಾಕಷ್ಟಿದೆ. ಅದಕ್ಕಾಗಿ ಮುಂದೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ಎಲ್ಲರೂ ಸಿದ್ದರಿರಬೇಕೆಂದು ಕರೆ ಕೊಟ್ಟರು.
ನಮಗೆ ಯಾರು ನ್ಯಾಯ ಕೊಡುತ್ತಾರೋ ಅಂತಹವರ ಪರವಾಗಿ ನಿಲ್ಲಬೇಕು. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕಪಾಠ ಕಲಿಸಬೇಕಾಗುತ್ತದೆ. ಈಗ ನಮಗೆ ಮೀಸಲಾತಿ ಸಿಗದಿದ್ದರೆ ಮುಂದಿನ ಪೀಳಿಗೆ ಕಷ್ಟ ಅನುಭವಿಸಬೇಕಾಗುತ್ತದೆನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಇದೇ ವೇಳೆ ಮಾತನಾಡಿದ ಯುವ ನಾಯಕ ರಾಹುಲ್ ಜಾರಕಿಹೊಳಿ, ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ಮೂಲತತ್ವದಂತೆ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಾ ಮಹಾಸ್ವಾಮಿಗಳ ನೇತೃತ್ವದಲ್ಲಿ ಎಸ್ಸಿ-ಎಸ್ಟಿ ಗೇ ಶೇ 7.5 ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ವ್ಯಾಪಿಸಿ ಬೆಂಗಳೂರು ಚಲೋ ಮಾಡಿದಾಗ ಅಂದಿನ ಸರ್ಕಾರ ನ್ಯಾ. ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದೆ. ಅದರಂತೆಯೇ ಆಯೋಗ ವಿಭಾಗೀಯ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಮೀಸಲಾತಿಯ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಯಥಾವತ್ ಜಾರಿಗೊಳಿಸಿ ಪ ಜಾತಿ ವರ್ಗಕ್ಕೆ ಸಾಮಾಜಿಕ ರಾಜಕೀಯ ಆರ್ಥಿಕ ಶೈಕ್ಷಣಿಕ ಪ್ರಗತಿ ಸಾಧಿಸಲು ಕ್ರಮವಹಿವಹಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ವರದಿ ಬಗ್ಗೆ ಸೂಕ್ಷ್ಮವಾಗಿ ಪರೀಶಿಲನೆ ಮಾಡಬೇಕು. ಸಮುದಾಯದ ಜನತೆ ಹೆಚ್ಚಾಳವಾದರಿಂದ ಮೀಸಲಾತಿ ಅಗತ್ಯವಿದೆ. ವಿಳಂಬ ತೋರದೆ ನ್ಯಾಯಯುತ್ತವಾದ ಹೋರಟಕ್ಕೆ ಸರ್ಕಾರ ಬೆಲೆಕೊಡಬೇಕೆಂದರು. ಈಗಾಗಲೇ ಮೀಸಲಾತಿ ವಿಳಂಬವಾಗಿದೆ ಸರ್ಕಾರ ನಿರ್ಲಕ್ಷ್ಯ ತೊರಿದರೆ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಮಾಡಿ ಸರ್ಕಾರ ಎಚ್ಚರಿಕ್ಕೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲಗೌಡ ಪಾಟೀಲ, ದಲಿತ ಮುಖಂಡ ಮಲ್ಲೇಶ ಚೌಗಲೇ, ವಿಜಯ ತಳವಾರ, ಮಹಾಂತೇಶ ತಳವಾರ, ಲಕ್ಷ್ಮೀ ಘಂಟಿ ವಿಜಯ ಲಕ್ಷ್ಮೀ ತಗ್ಗಿನಹಾಳ, ಉಮಾ ಮೂಲಿಮನಿ, ರಮೇಶ ಕೋಚಕರ, ರಾಯಪ್ಪಾ ಗುಂಡಪ್ಪಾ ಕಾಂಬಳೆ, ಮನೋಜ ಅಜ್ಜನಕಟ್ಟಿ, ಮಹಾದೇವ ತಳವಾರ, ರಾಜಶೇಖರ ತಳವಾರ, ಮಹೇಶ ಶಿಗ್ಗಿಹಳ್ಳಿ, ಸಚಿನ ಗದ್ದಿ, ಗೋಪಿನಾಥ, ಅಂಜನ ಗಂಡಕುದರಿ, ಮಲ್ಲೇಶ ಪೂಜಾರಿ , ಮಂಜುನಾಥ ಕಾಂಬಳೆ ಹಾಗೂ ಇತರರು ಇದ್ದರು.